Friday, February 13, 2026
HomeUncategorizedಹಂಪಿ ಉತ್ಸವಕ್ಕೆ ಅದ್ದೂರಿ ಚಾಲನೆ; ಈ ಸಲ ನವೆಂಬರ್ ನಲ್ಲಿಯೇ ಆಚರಣೆ- ಸಿಎಂ ಸಿದ್ದರಾಮಯ್ಯ ಘೋಷಣೆ

ಹಂಪಿ ಉತ್ಸವಕ್ಕೆ ಅದ್ದೂರಿ ಚಾಲನೆ; ಈ ಸಲ ನವೆಂಬರ್ ನಲ್ಲಿಯೇ ಆಚರಣೆ- ಸಿಎಂ ಸಿದ್ದರಾಮಯ್ಯ ಘೋಷಣೆ

  • ಸುನಾಮಿನ್ಯೂಸ್, 14,ಫೆ,2026
  • ಎಂ.ಪಿ.ಪ್ರಕಾಶ ವೇದಿಕೆ ಹಂಪಿ.
  • ಹುಳ್ಳಿಪ್ರಕಾಶ, ಸಂಪಾದಕರು
  • ವಿಜಯನಗರ ಸಾಮ್ರಾಜ್ಯದ ಅಪ್ರತಿಮ ವೈಭವವನ್ನು ಮರುಕಳಿಸುವ ‘ಹಂಪಿ ಉತ್ಸವ – 2026’ ಶುಕ್ರವಾರ ರಾತ್ರಿ ಅತ್ಯಂತ ವೈಭಯುತದೊಂದಿಗೆ ಅದ್ದೂರಿಯಾಗಿಯೇ ಪ್ರಾರಂಭವಾಯ್ತು.

ಇಂದ್ರಲೋಕದ ವೈಭವವನ್ನು ನೆನಪಿಸುವಂತಹ ಬೃಹತ್ ವೇದಿಕೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ನಗಾರಿ ಬಾರಿಸುವ ಮೂಲಕ ಈ ನಾಡಿನ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಜಾಗತಿಮಟ್ಟದಲ್ಲಿ ಎತ್ತಿ ಹಿಡಿಯುವ ಮೂರು ದಿನಗಳ ಕಾಲ ಜರುಗುವ ಹಂಪಿ ಉತ್ಸವ-2026ಕ್ಕೆ ಅಧಿಕೃತ ಚಾಲನೆ ನೀಡಿದರು.

ಸಚಿವರು, ಸಂಸದರು, ಅಖಂಡ ಬಳ್ಳಾರಿ ಜಿಲ್ಲೆಯ ಶಾಸಕರುಗಳು ಜೊತೆಗೆ ಕನ್ನಡ ಚಿತ್ರರಂಗದ ಮೇರು ನಟ ಹ್ಯಾಟ್ರಿಕ್ ಹಿರೋ ಡಾ. ಶಿವರಾಜ್ ಕುಮಾರ್, ಶ್ರೀಮತಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸೇರಿದಂತೆ ಅನೇಕ ಗಣ್ಯರು, ಉದ್ಘಾಟನಾ ಸಮಾರಂಭವನ್ನು ಸಾಕ್ಷಿಕರಿಸಿದರು. ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಜನಸ್ತೋಮ ಈ ಸುಂದರಕ್ಷಣವನ್ನು ಕಣ್ಣತುಂಬಿಕೊಂಡು ಸಂತಸ ವ್ಯಕ್ತಪಡಿಸಿತು.

ಉತ್ಸವಕ್ಕೆ ಸಿಎಂ ಚಾಲನೆ ನೀಡುತ್ತಿದ್ದಂತೆಯೇ ಬಾನಾಂಗಣದಲ್ಲಿ ಬಾಣ, ಬಿರುಸುಗಳ ಆರ್ಭಟ, ದ್ರೋಣ ಶೋಗಳು ಉತ್ಸವಕ್ಕೆ ರಾಜವೈಭೋಗದ ಸ್ಪರ್ಶ ನೀಡಿತು. ಬಹುಶಃ ಇತ್ತಿಚಿನ ವರ್ಷಗಳಲ್ಲಿ ಕಂಡಂತಹ ಅದ್ದೂರಿ ಉದ್ಘಾಟನಾ ಸಮಾರಂಭ ಎನ್ನುವಷ್ಟರ ಮಟ್ಟಿಗೆ ಈ ಸಲದ ಹಂಪಿ ಉತ್ಸವದ ಚಾಲನಾ ಸಮಾರಂಭ ಹೈಫೈ ಆಗಿತ್ತು.

* ನವೆಂಬರ್ ನಲ್ಲಿಯೇ ಉತ್ಸವ ಎಂದ ಸಿಎಂ:

ಇನ್ನುಮುಂದೆ ಪ್ರತಿ ವರ್ಷದ ನವೆಂಬರ್ 3, 4, 5 ರಂದು ಹಂಪಿ ಉತ್ಸವವನ್ನು ಆಯೋಜನೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಹೇಳಿದರು.

ಅದ್ಧೂರಿ ಹಂಪಿ ಉತ್ಸವದ ಆಚರಣೆಗೆ ಮೂಲಕಾರಣಕರ್ತರು ಎಂ ಪಿ ಪ್ರಕಾಶ್ ಅವರು. ಅವರೊಬ್ಬ ಅಪರೂಪದ ವ್ಯಕ್ತಿ. ನವೆಂಬರ್ 3,4 ಹಾಗು 5 ರಂದು ಮೂರು ದಿನಗಳ ಕಾಲ ಉತ್ಸವ ಆಚರಣೆ ಮಾಡಲು ಪ್ರಕಾಶರು ಕಾಲ ನಿಗದಿ ಮಾಡಿದ್ದರು ಮುಂದಿನ ವರ್ಷ ದಿಂದ ಅವರ ಆಶಯದಂತೆ ಉತ್ಸವವನ್ನು ನವೆಂಬರ್ ನಲ್ಲಿಯೇ ಮಾಡುತ್ತೇವೆ ಎಂದು ಘೋಷಿಸಿದರು.

ರಾಜ್ಯ ಸರ್ಕಾರ ಹಂಪಿ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಿದೆ. ಮಾಜಿ ಸಚಿವರಾದ ದಿವಂಗತ ಎಂ ಪಿ ಪ್ರಕಾಶ್ ಅವರು ಹಿಂದೆ ಕನ್ನಡ ಮತ್ತು ಸಂಸ್ಕೃತಿಯ ಸಚಿವರಾಗಿದ್ದ ಸಂದರ್ಭದಲ್ಲಿ, ಮೈಸೂರು ದಸರಾ ಉತ್ಸವದ ವಿಜೃಂಭಣೆಯನ್ನು ಕಂಡು, ಇದೇ ರೀತಿಯ ಉತ್ಸವವನ್ನು ಹಂಪಿಯಲ್ಲಿಯೂ ನೆರವೇರಿಸಬೇಕೆಂದು ಆಶಿಸಿದ್ದರು. ಎಂ ಪಿ ಪ್ರಕಾಶ್ ಅವರು ಕನ್ನಡ ನಾಡು, ನುಡಿ, ಸಾಹಿತ್ಯಗಳಲ್ಲಿ ಅಪಾರ ಆಸಕ್ತಿ ವಹಿಸಿದ್ದರು.
ಎಂದು ತಮ್ಮ ಮಾತಿನಲ್ಲಿ ಸಿಎಂ, ಹಂಪಿ ಉತ್ಸವದ ರೂವಾರಿ ಹಾಗು ತಮ್ಮ ಒಡನಾಡಿಯನ್ನು ನೆನಪು ಮಾಡಿಕೊಂಡರು.

.
ಇತಿಹಾಸ ತಿಳಿಯದವರು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ. ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ನಾಡು ಸಂಪತ್ಭರಿತವಾಗಿತ್ತು. ನಮ್ಮ ಸರ್ಕಾರ ಕೂಡ ಸಾಹಿತ್ಯ, ಸಂಸ್ಕೃತಿ, ಕಲೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ವಿಜಯನಗರ ಕಾಲದಲ್ಲಿ ಸಂಪ್ಭರಿತವಾದ ಹಂಪಿಯ ಹಿರಿಮೆಯನ್ನು ಹಂಪಿ ಉತ್ಸವದಿಂದ ತಿಳಿಯ ಬಹುದಾಗಿದೆ ಎಂದರು.

ವಿದೇಶಿ ಪ್ರವಾಸಿಗ ಅಬ್ದುಲ್ ರಜಾಕ್‌ರು ವಿಜಯನಗರ ಶ್ರೀಮಂತವಾದ ಸ್ಥಳವಾಗಿತ್ತು ಎಂದು ಉಲ್ಲೇಖಿಸಿದ್ದಾರೆ. ಅದ್ದೂರಿ ಹಂಪಿ ಉತ್ಸವದ ಆಚರಣೆ ಮೂಲಕ ಎಂದೂ ಮರೆಯದ ವಿಜಯನಗರ ಸಾಮ್ರಾಜ್ಯವನ್ನಾಗಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂದರು.

ಸಮಾಜದಲ್ಲಿ ಬಡವ – ಶ್ರೀಮಂತ, ಉತ್ತಮ ಮತ್ತು ಕೆಳ ಜಾತಿಗಳೆಂಬ ಬೇಧವಿದೆ. ಡಾ.ಬಿ.ಆರ್. ಅಂಬೇಡ್ಕರ್ ರವರು ಸಂವಿಧಾನ ರಚಿಸದಿದ್ದರೆ ಸಮಾನ ಅವಕಾಶಗಳು ದೊರೆಯಲು ಸಾಧ್ಯವಾಗುತ್ತಿರಲಿಲ್ಲ. ಸಮಾಜದ ಅಸಮಾನತೆಯನ್ನು ತೊಡೆದುಹಾಕಿದರೆ ಮಾತ್ರವೇ ಸಮಸಮಾಜ ನಿರ್ಮಾಣ ಸಾಧ್ಯ. 2013 ರಲ್ಲಿ ಮತ್ತು 2023 ರಲ್ಲಿ ಮುಖ್ಯಮಂತ್ರಿಯಾಗಿ ನಾನು ತಂದಿರುವ ಕಾರ್ಯಕ್ರಮಗಳು ಅಸಮಾನತೆಯ ನಿವಾರಣೆಗೆ ತಂದವುಗಳಾಗಿವೆ ಎಂದರು.

ನಮ್ಮ ಸರ್ಕಾರ ಅನೇಕ ಭಾಗ್ಯ ಯೋಜನೆಗಳನ್ನು ನೀಡಿದ್ದು, 2023 ರಿಂದ ಗ್ಯಾರಂಟಿ ಯೋಜನೆಗಳನ್ನು ನೀಡಿದೆ, ಇವು ಅಸಮಾನತೆಯನ್ನು ನಿವಾರಿಸುವ ಉದ್ದೇಶ ಹೊಂದಿದ ಯೋಜನೆಗಳು. ಜನರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತರಾಗಿಸಲು ಸಾಧ್ಯವಾಗದೇ ಇದ್ದರೆ, ಜಾತಿ ವ್ಯವಸ್ಥೇ ಹೋಗಲಾಡಿಸಲು ಅಸಾಧ್ಯ. ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಪ್ರತಿ ಕುಟುಂಬಕ್ಕೆ ವಾರ್ಷಿಕವಾಗಿ ಸುಮಾರು 60 ಸಾವಿರ ರೂ.ಗಳ ಆರ್ಥಿಕ ಬಲವನ್ನು ತುಂಬುತ್ತಿದೆ. ಗ್ಯಾರಂಟಿ ಯೋಜನೆಗಳು ಜನರಿಗೆ ಕೊಂಡುಕೊಳ್ಳುವ ಶಕ್ತಿಯನ್ನು ಹೆಚ್ಚಿಸುತ್ತಿದೆ ಎಂದರು.

ಸರ್ಕಾರ ಆಚರಿಸುವ ಚಾಲುಕ್ಯ ಉತ್ಸವ, ಹಂಪಿ ಉತ್ಸವ, ಕಿತ್ತೂರು ಉತ್ಸವ, ಆನೆಗುಂದಿ ಉತ್ಸವ, ಬನವಾಸಿ ಉತ್ಸವ, ಮೈಸೂರು ದಸರಾ, ಕರಾವಳಿ ಉತ್ಸವಗಳ ಮೂಲಕ ನಾಡಿನ ಸಾಹಿತ್ಯ, ಕಲೆ, ಸಂಗೀತ ಪರಂಪರೆಗಳನ್ನು ಸಂರಕ್ಷಿಸುವ ದಿಸೆಯಲ್ಲಿ ಮುಖ್ಯವಾಗಿದೆ. ಮುಂದಿನ ಪೀಳಿಗೆಗೆ ಕನ್ನಡದ ಶ್ರೀಮಂತ ಪರಂಪರೆ ಕೊಂಡೊಯ್ಯವ ದಿಸೆಯಲ್ಲಿ ಸರ್ಕಾರ ಎಲ್ಲ ರೀತಿಯ ನೆರವು ನೀಡಲು ಬದ್ಧವಾಗಿದೆ ಎಂದರು ಸಿಎಂ ಸಿದ್ದರಾಮಯ್ಯ ನವರು.

ವಿಜಯನಗರ ಕ್ಷೇತ್ರದ ಶಾಸಕರಾದ ಹೆಚ್.ಆರ್.ಗವಿಯಪ್ಪನವರ ಅಧ್ಯಕ್ಷತೆಯಲ್ಲಿ ಜರುಗಿದ ಉದ್ಘಾಟನಾ ಸಮಾರಂಭದಲ್ಲಿ
ಕಾನೂನು, ಸಂಸದೀಯ, ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ.ಪಾಟೀಲ್, ನಗರಾಭಿವೃದ್ಧಿ ಸಚಿವ ಭೈರತ್ತಿ ಸುರೇಶ, ವಿಜಯನಗರ
​ಜಿಲ್ಲಾ ಉಸ್ತುವಾರಿ ಸಚಿವ ಬಿ.ಝಡ್ ಜಮೀರ್ ಅಹಮದ್ ಖಾನ್, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಿ, ಬಳ್ಳಾರಿ ಲೋಕಸಭಾ ಕ್ಷೇತ್ರದ ಸದಸ್ಯರಾದ ಈ.ತುಕಾರಾಂ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ.ರೇವಣ್ಣ, ಬಿ.ನಾಗೇಂದ್ರ, ಶಾಸಕರುಗಳಾದ ಬಿ.ನಾಗೇಂದ್ರ, ಕೆ.ನೇಮಿರಾಜನಾಯ್ಕ್, ಬಿಎಂ.ನಾಗರಾಜ, ಡಾ. ಎನ್.ಟಿ ಶ್ರೀನಿವಾಸ, ಶ್ರೀಮತಿ ಲತಾ ಮಲ್ಲಿಕಾರ್ಜುನ, ನಾರಾ ಭರತ್ ರೆಡ್ಡಿ ಹಾಗು
ಹ್ಯಾಟ್ರಿಕ್ ಹಿರೋ ಡಾ. ಶಿವರಾಜ್ ಕುಮಾರ್, ಶ್ರೀಮತಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸೇರಿದಂತೆ ಅನೇಕ ಗಣ್ಯರು, ಜಿಲ್ಲಾಧಿಕಾರಿಗಳ ಸಹಿತ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

  • ಹುಳ್ಳಿಪ್ರಕಾಶ, ಸಂಪಾದಕರು,9448234961
RELATED ARTICLES
- Advertisment -

Most Popular

Recent Comments