- ಸುನಾಮಿನ್ಯೂಸ್, 16,ಫೆ,2026
- ಹಗರಿಬೊಮ್ಮನಹಳ್ಳಿ/ವಿಜಯನಗರ
* ಹುಳ್ಳಿಪ್ರಕಾಶ, ಸಂಪಾದಕರು
ಆನೆಕಲ್ಲು ಕುರುಚಲ ಅಡವಿಯಲ್ಲಿ ನೆಲಸಿರುವ
ಬಲವಂತಪ್ಪನ ದರ್ಶನ ಪಡೆದು, ಆತನನ್ನು ಆರಾಧಿಸುವ ಮೂಲಕ ನೂರಾರು ಭಕ್ತರು ಈ ಸಲದ ಮಹಾಶಿವರಾತ್ರಿಯನ್ನು ಆಚರಿಸಿದರು. ಬೇಡಿಕೊಂಡ ಇಷ್ಟಾರ್ಥಗಳನ್ನು ನೇರವೇರಿಸುತ್ತಾನೆ ಎನ್ನುವ ಬಲವಾದ ನಂಬಿಕೆ ಇರುವ ಕಾರಣಕ್ಕೇನೆ ಅಡವಿಯನ್ನು ಲೆಕ್ಕಿಸದೇ ಪ್ರತಿ ವರ್ಷ ಮಹಾಶಿವರಾತ್ರಿ ದಿನ ದಂದು ಭಕ್ತರು ಬಲವಂತಪ್ಪನ ಬಳಿ ನೆರೆಯುತ್ತಾರೆ.
ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಆನೆಕಲ್ಲು, ದಶಮಾಪುರ ವ್ಯಾಪ್ತಿಯಲ್ಲಿರುವ ಗುಡ್ಡದ ತಿಮ್ಮಪ್ಪನ ಕಾದಿಟ್ಟ ಅರಣ್ಯ ಪ್ರದೇಶ ಇದ್ದು ಅರಣ್ಯ ಇಲಾಖೆಯ ಪ್ರಕಾರ ಇದು ಚಿಲಕನಹಟ್ಟಿ ಕಾದಿಟ್ಟ ಅರಣ್ಯ ಪ್ರದೇಶದ ವ್ಯಾಪ್ತಿಗೆ ಬರುತ್ತದೆ. ಈ ಅಡವಿಯ ನಡು ಭಾಗದ ಗುಡ್ಡದ ಕೆಳಗಡೆ ಬೃಹದಾಕಾರದ ಬಂಡೆಯ ಕೆಳಗೆ ಲಿಂಗು ಆಕಾರದಲ್ಲಿ ಶ್ರೀ ಬಲವಂತಪ್ಪ ನೆಲಸಿದ್ದಾನೆ.
ಬಲವಂತಪ್ಪನ ದರ್ಶನವು ನಿಜಕ್ಕೂ ಒಂದು ಮಹಾಸೌಭಾಗ್ಯ ಎನ್ನುತ್ತಾರೆ ಹಲವು ವರ್ಷಗಳಿಂದಲೂ ಮಹಾಶಿವರಾತ್ರಿ ದಿನ ಇಲ್ಲಿಗೆ ಬರುವ ಭಕ್ತರಾದ ಚಿಂತ್ರಪಳ್ಳಿ ತಳವಾರ ಕೊಟ್ರೇಶ.
ಆನೆಕಲ್ಲು, ಆನೆಕಲ್ಲು ತಾಂಡ ಹಾಗು
ದಶಮಾಪುರ ಗ್ರಾಮದಿಂದ ಬಲವಂತಪ್ಪನ ಬಳಿಗೆ ಕಾಡಿನೊಳಗೆ ಸಾಗುವ ಪ್ರಯಾಣವೇ ಒಂದು ರೋಮಾಂಚನ. ಅತ್ಯಂತ ಕಿರಿದಾದ ದಾರಿಗಳು, ಕುರಚಲು ಕಾಡು, ಚಿಗುರುತ್ತಿರುವ ಮರಗಳು, ಎಲೆ ಉದಿರಿಸಿ ವಸಂತಕ್ಕೆ ಕೈಚಾಚಿದ ನಿಸರ್ಗ — ಇವೆಲ್ಲವೂ ಮನಸ್ಸಿಗೆ ವಿಶಿಷ್ಟವಾದ ಶಾಂತಿ ಮತ್ತು ಆನಂದ ನೀಡುತ್ತವೆ ಎನ್ನುತ್ತಾರೆ ತಳವಾರ ಕೊಟ್ರೇಶ.
ಎಷ್ಟೇ ಕಷ್ಟದ ದಾರಿ ಅನುಭವಿಸಿದರೂ ಕೊನೆಗೆ
ಅಲ್ಲಿ ತಲುಪಿದಾಗ ಪ್ರಕೃತಿಯ ಮಧ್ಯೆ ಭಕ್ತಿಭಾವದಿಂದ ನೆಲೆಸಿರುವ ಶ್ರೀ ಬಲವಂತಪ್ಪನ ಸಾನ್ನಿಧ್ಯ ಮನಸ್ಸಿಗೆ ಅಪಾರ ತೃಪ್ತಿ ನೀಡುತ್ತದೆ. ಕಲ್ಲಿನ ನೆರಳಿನಲ್ಲಿ, ಹಸಿರು ಕಾಡಿನ ಮಡಿಲಲ್ಲಿ ದೇವರ ದರ್ಶನ ಪಡೆಯುವುದು ಜೀವನದ ಅಪರೂಪದ ಅನುಭವವೇ ಸರಿ.
ಈ ಪ್ರದೇಶವು ಹಿಂದೆ ದಟ್ಟ ಅರಣ್ಯವಾಗಿದ್ದು, ಸಾಧು–ಸಂತರ ತಪೋಭೂಮಿಯಾಗಿತ್ತು ಎಂದು ಹಿರಿಯರು ಹೇಳುತ್ತಾರೆ.
ವಿಜಯನಗರ ಕಾಲಘಟ್ಟದಲ್ಲಿ (14–16ನೇ ಶತಮಾನ) ಕಾಲಘಟ್ಟದಲ್ಲಿ ಇಲ್ಲಿ ಪೂಜೆ ನಡೆಯುತ್ತಿತ್ತು ಎಂಬ ಮಾತು ಕೇಳಿಬರುತ್ತದೆ.
ಸ್ಥಳೀಯ ಕೃಷಿಕರು, ಕುರಿಗಾಹಿಗಳು ಪಶು ಪಾಲಕರು ತಮ್ಮ ರಕ್ಷಕ ದೇವರೆಂದು ಶ್ರೀ ಬಲವಂತಪ್ಪನನ್ನು ಪೂಜಿಸುತ್ತಾರೆ.
ಮುಂದಿನ ಸಲದ ಮಹಾಶಿವರಾತ್ರಿ ದಿನಕ್ಕೆ ಬಲವಂತಪ್ಪನ ಬಳಿಗೆ ಬನ್ನಿ.
- ಮಾಹಿತಿ: ಕೊಟ್ರೇಶ ತಳವಾರ, ಚಿಂತ್ರಪಳ್ಳಿ.

