Monday, February 16, 2026
HomeUncategorized'ಕೈ' ಸಂಸದ ತುಕಾರಾಂ ನಿರಂತರ ಪ್ರಯತ್ನ; ಮೋದಿ ಸರ್ಕಾರ ದಿಂದ ಸಿಕ್ತು ಸಾವಿರಾರು ಕೋಟಿರೂ ವೆಚ್ಚದ...

‘ಕೈ’ ಸಂಸದ ತುಕಾರಾಂ ನಿರಂತರ ಪ್ರಯತ್ನ; ಮೋದಿ ಸರ್ಕಾರ ದಿಂದ ಸಿಕ್ತು ಸಾವಿರಾರು ಕೋಟಿರೂ ವೆಚ್ಚದ ಬೃಹತ್ ಯೋಜನೆಗೆ ಗ್ರೀನ್ ಸಿಗ್ನಲ್!

  • ಸುನಾಮಿನ್ಯೂಸ್,16,ಫೆ,2026
  • ಬಳ್ಳಾರಿ/ನವದೆಹಲಿ

* ಹುಳ್ಳಿಪ್ರಕಾಶ, ಸಂಪಾದಕರು

ಬಳ್ಳಾರಿ – ಹೊಸಪೇಟೆ ಈ ಎರಡು ನಗರಗಳ ನಡುವೆ 2372 ಕೋಟಿ ರೂಪಾಯಿ ವೆಚ್ಚದಲ್ಲಿ ಸುಮಾರು 65 ಕಿಮಿ ಉದ್ದದ 3ನೇ ಮತ್ತು 4ನೇ ಮಲ್ಟಿಟ್ರ್ಯಾಕ್ ಮಾರ್ಗದ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರಮೋದಿ ಅವರ ಅಧ್ಯಕ್ಷತೆಯಲ್ಲಿ ಕಳೆದವಾರ ಜರುಗಿದ ಕೇಂದ್ರ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿತು.

ಬಿಜೆಪಿ ಪಕ್ಷದ ನೇತೃತ್ವದ ಕೇಂದ್ರ ಸರ್ಕಾರ ಅನುಮೋದಿಸಿರುವ ಸಾವಿರಾರು ಕೋಟಿರೂಪಾಯಿಗಳ ಈ ಬೃಹತ್ ಯೋಜನೆ ಅಖಂಡ ಬಳ್ಳಾರಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮಹತ್ತರವಾದ ಪಾತ್ರವಹಿಸಲಿದೆ. ಕೇಂದ್ರದ ಈ ನಿರ್ಧಾರ ಕಾಂಗ್ರೆಸ್ ಪಕ್ಷದ ಸಂಸದರು ಪ್ರತಿನಿಧಿಸುತ್ತೀರುವ ಕ್ಷೇತ್ರಕ್ಕೆ ಸಿಕ್ಕಿರುವ ಬಹು ದೊಡ್ಡ ಕೊಡುಗೆ ಎನ್ನಬಹುದು.

ಇಂತಹ ಬೃಹತ್ ಪ್ರಮಾಣದ ಅನುದಾನದ ಮಹತ್ವದಾಯಕ ಯೋಜನೆ ಅವಳಿ ಗಣಿ ಜಿಲ್ಲೆಗಳಿಗೆ ಹರಿದು ಬರುವುದರ ಹಿಂದೆ ಬರೀ ಕೇವಲ ಇಪ್ಪತ್ತು ತಿಂಗಳ ಹಿಂದಷ್ಟೆ ಗಣಿನಾಡಿನಿಂದ ಲೋಕಸಭೆ ಪ್ರವೇಶಿಸಿರುವ ಅಭಿವೃದ್ಧಿ ಮಾಂತ್ರಿಕ ಸಂಸದರೆಂದೆ ಹೆಸರಾಗಿರುವ ಈ.ತುಕಾರಾಂ ಅವರ ಪಾತ್ರ ಬಹು ದೊಡ್ಡದಿದೆ ಎನ್ನುವ ಮಾತುಗಳು ಅವಳಿ ಜಿಲ್ಲೆಯ ತುಂಬಾ ಸಾರ್ವಜನಿಕವಾಗಿ ಕೇಳಿ ಬರುತ್ತೀವೆ.

ಈ ಕಾರಣಕ್ಕೇನೆ, ಬಳ್ಳಾರಿ ಮತ್ತು ವಿಜಯನಗರ ಈ ಎರಡು ಜಿಲ್ಲೆಗಳನ್ನು ಲೋಕಸಭೆಯಲ್ಲಿ ಪ್ರತಿನಿಧಿಸುತ್ತೀರುವ ಕಾಂಗ್ರೆಸ್ ಪಕ್ಷದ, ಸಂಸದ ಈ.ತುಕಾರಾಂ ಅವರು ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ.

ಅಖಂಡ ಬಳ್ಳಾರಿ ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಇದು ಅತ್ಯಂತ ಮಹತ್ವದ ಯೋಜನೆ ಆಗಿದ್ದು, ಇದಕ್ಕಾಗಿ ಅವರು ಕೇಂದ್ರ ಸರ್ಕಾರಕ್ಕೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿರುವ ಬಗ್ಗೆ ತಮ್ಮ ಫೇಸ್ ಬುಕ್ ನಲ್ಲಿ ಸಂಸದರು ಪೊಸ್ಟ್ ಹಂಚಿಕೊಂಡಿದ್ದಾರೆ.

65 ಕಿ.ಮೀ ಉದ್ದದ ರೈಲು ಹಳಿಗಳ ವಿಸ್ತರಣೆಯು ಅಖಂಡ ಬಳ್ಳಾರಿ ಜಿಲ್ಲೆಯ ವಿಶ್ವ ಪಾರಂಪರಿಕ ತಾಣವಾದ ಹಂಪಿ ಹಾಗೂ ಸುತ್ತಮುತ್ತಲಿನ ಪ್ರವಾಸಿ ತಾಣಗಳ ಪ್ರವಾಸೋದ್ಯಮಕ್ಕೆ ಉತ್ತೇಜನ, ಗಣಿ ಅದಿರು ಸಾಗಾಣಿಕೆ, ಸರಕು -ಸೇವೆಗಳ ಸಾಗಣೆ ಮಾಡಲು, ನೇರ ಮತ್ತು ಪರೋಕ್ಷವಾಗಿ ಉದ್ಯೋಗ ಸೃಷ್ಟಿಯಾಗಲಿವೆ.ಹಾಗೂ ರೈಲ್ವೆ ಮೇಲುಸೇತುವೆ (ROB) -ಕೆಳಸೇತುವೆಗಳ(RUB) ನಿರ್ಮಾಣದ ಮೂಲಕ ಉತ್ತಮ ಸಂಚಾರ ವ್ಯವಸ್ಥೆ ನಿರ್ಮಾಣವಾಗಲಿದೆ.

ಈ ಯೋಜನೆಗಾಗಿ ನಾನು ಸಂಸದನಾಗಿ ಪ್ರಮಾಣವಚನ ಸ್ವೀಕರಿಸಿದ ದಿನಗಳಿಂದಲೇ ನಿರಂತರವಾಗಿ ಮಾನ್ಯ ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ರವರಿಗೆ, ರಾಜ್ಯ ಖಾತೆ ರೈಲ್ವೆ ಸಚಿವರಾದ ಶ್ರೀ ಸೋಮಣ್ಣ ರವರಿಗೆ ಹಾಗೂ ಕೇಂದ್ರ ಹಣಕಾಸು ಸಚಿವರು ಅವರಿಗೆ ಮೇಲಿಂದ,ಮೇಲೆ ಮನವಿ ಸಲ್ಲಿಸುತ್ತಾ ಬರುತ್ತಿದ್ದೆ. ನಿರಂತರ ಪ್ರಯತ್ನದಿಂದಾಗಿ ಇವತ್ತು ಸಕಾರಗೊಂಡಿದೆ. ಬಳ್ಳಾರಿ ಭಾಗದ ಅಭಿವೃದ್ಧಿಗೆ ಈ ಯೋಜನೆ ಹೊಸ ದಿಕ್ಕು ನೀಡಲಿದೆ ಎಂದು ಸಂಸದ ಈ.ತುಕಾರಾಂ ಹರ್ಷ ವ್ಯಕ್ತಪಡಿಸಿದ್ದಾರೆ.

* ಬಳ್ಳಾರಿ-ಹೊಸಪೇಟೆ ಜೊತೆಗೆ ಇನ್ನೇರಡು:

ದೆಹಲಿ, ಹರಿಯಾಣ, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳಾದ್ಯಂತ ಒಟ್ಟು 12 ಜಿಲ್ಲೆಗಳನ್ನು ಒಳಗೊಂಡ ಮೂರು ಮಲ್ಟಿಟ್ರ‍್ಯಾಕ್ ಯೋಜನೆಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಕಳೆದವಾರ ನಡೆದ ಆರ್ಥಿಕ ವ್ಯವಹಾರಗಳ ಕುರಿತಾದ ಕೇಂದ್ರ ಸಚಿವ ಸಂಪುಟ ಸಮಿತಿಯು ಕೇಂದ್ರ ರೈಲ್ವೆ ಸಚಿವಾಲಯದ ಮೂರು ಯೋಜನೆಗಳನ್ನು ಒಟ್ಟು 18,509 ಕೋಟಿ ರೂ. ಅಂದಾಜು ವೆಚ್ಚದೊಂದಿಗೆ ಅನುಮೋದಿಸಿತು.

ಬಳ್ಳಾರಿ-ಹೊಸಪೇಟೆ ಜೊತೆಗೆ, ಸಾರಾ-ಮನ್ಮಾಡ್ 3ನೇ ಮತ್ತು 4ನೇ ಮಾರ್ಗ, ದೆಹಲಿ-ಅಂಬಾಲ 3ನೇ ಮತ್ತು 4ನೇ ಮಾರ್ಗ ಅನುಮೊದನೆಗೊಂಡಿರುವ ಇನ್ನೂಳಿದ ರೈಲ್ವೇ ಮಾರ್ಗಗಳಾಗಿವೆ.

* ಸರಕು ಸಾಗಾಟ, ಟೂರಿಜ್ಂಗೆ ಕಾಯಕಲ್ಪ:


ಬಳ್ಳಾರಿ-ಹೊಸಪೇಟೆ ಮೂರನೇ ಮತ್ತು ನಾಲ್ಕನೇ ಮಾರ್ಗ ಯೋಜನೆಯು ರಾಜ್ಯದ ಉಕ್ಕು ಮತ್ತು ಗಣಿಗಾರಿಕಾ ಕೇಂದ್ರವಾದ ಬಳ್ಳಾರಿ ಪ್ರದೇಶದಲ್ಲಿ ದಟ್ಟಣೆಯನ್ನು ನಿವಾರಿಸಿ, ಸರಕು ಸಾಗಣೆಯನ್ನು ಸುಗಮಗೊಳಿಸಲಿದೆ. ಈ ಯೋಜನೆಯು ಹೊಸಪೇಟೆಯಿಂದ ಹಂಪಿ, ಬಳ್ಳಾರಿ ಕೋಟೆ, ದರೋಜಿ ಕರಡಿ ಅಭಯಾರಣ್ಯ, ತುಂಗಭದ್ರಾ ಅಣೆಕಟ್ಟು, ಕೆಂಚನಗುಡ್ಡ ಮತ್ತು ವಿಜಯ ವಿಠ್ಠಲ ದೇವಾಲಯ ಮುಂತಾದ ಪ್ರಮುಖ ಪ್ರವಾಸಿ ತಾಣಗಳಿಗೆ ರೈಲು ಸಂಪರ್ಕವನ್ನು ಸುಧಾರಿಸಲಿದೆ.

ಹಾಗೇನೆ ಅನೊದನೆಗೊಂಡಿರುವ ಮೂರು ಮಲ್ಟಿಟ್ರ್ಯಾಕ್ ಯೋಜನೆಗಳು ಕಾರ್ಯರೂಪಕ್ಕೆ ಬಂದಾಗ ಸುಮಾರು 3,902 ಹಳ್ಳಿಗಳು (ಸುಮಾರು 97 ಲಕ್ಷ ಜನಸಂಖ್ಯೆ) ಹೆಚ್ಚುವರಿ ಸಂಪರ್ಕ ಪಡೆಯಲಿವೆ. ಜೊತೆಗೆ ಕಲ್ಲಿದ್ದಲು, ಉಕ್ಕು, ಕಬ್ಬಿಣದ ಅದಿರು, ಸಿಮೆಂಟ್, ಸುಣ್ಣದ ಕಲ್ಲು, ಕಂಟೇನರ್, ಆಹಾರ ಧಾನ್ಯಗಳು, ಸಕ್ಕರೆ, ರಸಗೊಬ್ಬರಗಳು ಮುಂತಾದ ಸರಕುಗಳ ಸಾಗಣೆಗೆ ದೊಡ್ಡಮಟ್ಟದ ಸಾಮರ್ಥ್ಯ ಹೆಚ್ಚಳವಾಗಲಿದೆ. ಒಟ್ಟು ಯೋಜನೆಗಳಿಂದ ವರ್ಷಕ್ಕೆ 96 ಮಿಲಿಯನ್ ಟನ್ ಹೆಚ್ಚುವರಿ ಸರಕು ಸಾಗಣೆ ಸಾಧ್ಯವಾಗಲಿದೆ.

* ಪರಿಸರ ಸ್ನೇಹಿ, 2031ಕ್ಕೆ ಪೂರ್ಣ:

ಪರಿಸರದ ದೃಷ್ಟಿಯಿಂದಲೂ ಈ ಯೋಜನೆಗಳು ಮಹತ್ವದ್ದು. ರೈಲ್ವೆಯು ಪರಿಸರ ಸ್ನೇಹಿ ಸಾರಿಗೆ ವಿಧಾನವಾಗಿರುವುದರಿಂದ, ತೈಲ ಆಮದು ಸುಮಾರು 22 ಕೋಟಿ ಲೀಟರ್ ಕಡಿಮೆಯಾಗಲಿದ್ದು, CO₂ ಹೊರಸೂಸುವಿಕೆಯು 111 ಕೋಟಿ ಕೆ.ಜಿ. ಕಡಿಮೆಯಾಗಿ, ಇದು 4 ಕೋಟಿ ಮರಗಳನ್ನು ನೆಟ್ಟಷ್ಟು ಪರಿಣಾಮ ಬೀರುತ್ತದೆ. ಇದರಿಂದ ದೇಶದ ಲಾಜಿಸ್ಟಿಕ್ಸ್ ವೆಚ್ಚ ಕಡಿಮೆಯಾಗಿ, ಆರ್ಥಿಕತೆಗೆ ಉತ್ತೇಜನ ಸಿಗಲಿದೆ.

ಈ ಯೋಜನೆಗಳು 2030-31ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. PM-ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್‌ನಡಿ ಈ ಯೋಜನೆಗಳನ್ನು ರೂಪಿಸಲಾಗಿದ್ದು, ಬಹು-ಮೋಡ್ ಸಂಪರ್ಕ ಮತ್ತು ಲಾಜಿಸ್ಟಿಕ್ಸ್ ದಕ್ಷತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.

  • ಹುಳ್ಳಿಪ್ರಕಾಶ, ಸಂಪಾದಕರು, 9448234961
RELATED ARTICLES
- Advertisment -

Most Popular

Recent Comments