- ಸುನಾಮಿನ್ಯೂಸ್, ಫೆ,27
- ಹಗರಿಬೊಮ್ಮನಹಳ್ಳಿ/ವಿಜಯನಗರ
* ಹುಳ್ಳಿಪ್ರಕಾಶ, ಸಂಪಾದಕರು
ಬುಡಕಟ್ಟು ಸಾಂಸ್ಕೃತಿಕ ನಾಯಕ,
ಜೋಡು ಹುಲಿಗಳ ಹೆಗಲ ಮೇಲೆ ನೊಗಿಟ್ಟು, ಸರ್ಪದ ಬಾರಕೋಲು ಮೂಲಕ ಬೇಸಾಯ ಮಾಡಿದಂತಹ ಮಹಾ ಮಹಿಮ, ಪವಾಡ ಪುರುಷ ಕೂಲಹಳ್ಳಿ ಗೋಣಿಬಸವೇಶ್ವರರ ರಥೋತ್ಸವ ಇಂದು (ಫೆ,27) ಸಂಜೆ 4 ಗಂಟೆಯ ತರುವಾಯ ಅದ್ದೂರಿಯಾಗಿ ಜರುಗಲಿದೆ. ಈಗಾಗಲೇ ಕೂಲಹಳ್ಳಿಯಲ್ಲಿ ಗೋಣಿಬಸಪ್ಪನ ಭಕ್ತರ ಮಹಾಸಾಗರವೇ ನಿರ್ಮಾಣಗೊಂಡಿದೆ.
ಇಳಿ ಸಂಜೆ ಜರುಗುವ ಗೋಣಿಬಸವೇಶ್ವರರ ರಥೋತ್ಸವವನ್ನು ಕಣ್ಣತುಂಬಿಕೊಳ್ಳಲು ನಾಡಿನ ವಿವಿಧ ಕಡೆಗಳಿಂದ ಲಕ್ಷಾಂತರ ಭಕ್ತರು ಗೋಣಿಬಸಪ್ಪನ ನೆಲವಿಡು ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕೂಲಹಳ್ಳಿ ಗ್ರಾಮದತ್ತ ಜೋಡೆತ್ತಿನ ಬಂಡಿ, ಟ್ರಾಕ್ಟರ್, ಕಾರು,ಜೀಪು,ಬೈಕ್ ಹತ್ತಿಕೊಂಡು, ಇತ್ತ ಪಾದಯಾತ್ರೆಯ ಮೂಲಕವೂ ಭಕ್ತರು ಕೂಲಹಳ್ಳಿಗೆ ಆಗಮಿಸಿ ಬಂದು ರಥ ಎಳೆದು ಗೋಣಿಬಸಪ್ಪನ ಆರ್ಶೀವಾದ ಪಡೆಯಲಿದ್ದಾರೆ.
ವಿಶೇಷ ಏನೇಂದರೇ, ಎಲ್ಲಾ ರಥೋತ್ಸವಗಳಲ್ಲಿ ಆಯಾ ದೇವರುಗಳ ಉತ್ಸವ ಮೂರ್ತಿಗಳು ತೇರನ್ನು ಏರುವುದು ಸಹಜ ಆದರೇ ಕೂಲಹಳ್ಳಿಯಲ್ಲಿ ಜರುಗುವ ರಥೋತ್ಸವದಲ್ಲಿ ಗೋಣಿಬಸಪ್ಪನ ಉತ್ಸವ ಮೂರ್ತಿ ರಥ ಏರುವುದಿಲ್ಲ! ಬದಲಿಗೆ ಕೊಟ್ಟೂರು ದೊರೆ ಶ್ರೀಗುರು ಕೊಟ್ಟೂರೇಶ್ವರರ ಉತ್ಸವ ಮೂರ್ತಿ ತೇರನ್ನು ಏರುತ್ತದೆ.
ಗುರು ಕೊಟ್ಟೂರೇಶ್ವರರು ವರಸೆಯಲ್ಲಿ ಗೋಣಿಬಸವೇಶ್ವರರಿಗೆ ದೊಡ್ಡಪ್ಪನಾಗಬೇಕು. ಹೀಗಾಗಿ ನನ್ನ ರಥದಲ್ಲಿ ನನ್ನ ದೊಡ್ಡಪ್ಪ ಇರಬೇಕೆಂದು ಗೋಣಿಬಸಪ್ಪನ ವಾಣಿ ಆಗಿದ್ದು ಹೀಗಾಗಿ ಕೊಟ್ಟೂರೇಶ್ವರರು ತೇರನ್ನು ಏರುತ್ತಾರೆ ಎನ್ನುತ್ತಾರೆ ಗೋಣಿಬಸಪ್ಪನ ಭಕ್ತರು.
ಕೂಲಹಳ್ಳಿ ಸುತ್ತಲಿನ ಕೃಷಿಭೂಮಿಗಳಲ್ಲಿ ಬೆಳೆ ಕಟಾವ್ ಆಗಿದ್ದು ಖಾಲಿ ಇರುವ ಹೊಲಗಳಲ್ಲಿ ಭಕ್ತರು ತಮ್ಮ ಶಕ್ತನುಸಾರ ಟೆಂಟ್ ಗಳನ್ನು ಹೊಡೆದುಕೊಂಡು, ಅಲ್ಲಿಯೇ ಆಡುಗೆ ತಯಾರಿಸಿ ಗೋಣಿಬಸಪ್ಪನಿಗೆ ನೈವೇದ್ಯ ಸಮರ್ಪಿಸಿ ಭಕ್ತಿತೊರುತ್ತೀದ್ದಾರೆ.
ಬಹು ಮುಖ್ಯವಾಗಿ ಗೋಣಿಬಸಪ್ಪನಿಗೆ ಶ್ರೀಸಾಮಾನ್ಯರ ಭಕ್ತಗಣವೇ ಹೆಚ್ಚಿದೆ. ಜಾತಿ,ಧರ್ಮಾತೀತಾವಾಗಿ ಭಕ್ತರಿದ್ದಾರೆ. ಗೋಣಿಬಸಪ್ಪನ ಬಗ್ಗೆ ಲಿಖಿತ ಇತಿಹಾಸದ ದಾಖಲೆಗಳು ಸಿಗುವುದು ವಿರಳ! ಆದರೇ ಜನಸಾಮಾನ್ಯರ ಮಧ್ಯೆ ಕೂಲಹಳ್ಳಿ ಗೋಣಿಬಸವೇಶ್ವರರ ಬಗ್ಗೆ ಸಾಕಷ್ಟು ದಂತಕಥೆಗಳು, ಐಹಿತ್ಯಗಳು, ಲಾವಣಿಪದಗಳು, ಖಂಡಕಾವ್ಯಗಳು ಚಾಲ್ತಿಯಲ್ಲಿವೆ.
12ನೇ ಶತಮಾನದಲ್ಲಿ ಕರ್ನಾಟಕದಲ್ಲಿ ಬಸವಣ್ಣರ ಮೂಲಕ ಧಾರ್ಮಿಕ ಕ್ಷೇತ್ರದಲ್ಲಿ ಹೊಸ ಪರಂಪರೆ ಶುರುವಾಯ್ತು. ಈ ಚಳುವಳಿ, ಸಮಾಜದಲ್ಲಿನ ಶೋಷಿತ ವರ್ಗಗಳಲ್ಲಿ ಚಾಲ್ತಿಯಲ್ಲಿದ್ದ ಅನಿಷ್ಟ ಜಾತಿಪದ್ಧತಿ, ವರ್ಗ-ವರ್ಣ ವ್ಯವಸ್ಥೆ ವಿರುದ್ಧ ಜನಜಾಗೃತಿ ಮೂಡಿಸುವ ಕೆಲಸ ಮಾಡಿತು. ಬಹು ಮುಖ್ಯವಾಗಿ ಕಾಯಕ ಸಂಸ್ಕೃತಿಯನ್ನು ಎತ್ತಿಹಿಡಿತು.
ಬಸವಣ್ಣರ ತರುವಾಯ ಹದಿನಾರನೆಯ ಶತಮಾನದಲ್ಲಿ ಮಧ್ಯಕರ್ನಾಟಕದ ಕೊಟ್ಟೂರಿನಲ್ಲಿ ಗುರು ಕೊಟ್ಟೂರೇಶ್ವರ, ಹರಪನಹಳ್ಳಿಯಲ್ಲಿ ಕೆಂಪೇಶ್ವರ, ಅರಸೀಕೆರೆಯಲ್ಲಿ ಕೋಲಶಾಂತೇಶ್ವರ, ನಾಯಕನಹಟ್ಟಿಯಲ್ಲಿ ತಿಪ್ಪೇರುದ್ರೇಶ್ವರ ಹಾಗೂ ಕೂಲಹಳ್ಳಿಯಲ್ಲಿ ಮದ್ದಾನೇಶ್ವರರು ಎಂಬ
ಪಂಚಗಣಾಧೀಶ್ವರರು ಶರಣ ಚಳುವಳಿಯ ರಥಕ್ಕೆ ಪ್ರಧಾನಚಾಲಕರಾಗಿ ಸಮಾಜಸುಧಾರಣೆಗೆ ಮುಂದಾದರು.
ಈ ಪಂಚಗಣಾಧೀಶ್ವರ ಪೈಕಿ ಕೂಲಹಳ್ಳಿಯಲ್ಲಿದ್ದ ಮದ್ದಾನೇಶ್ವರು ಮಾತ್ರವೇ ಕನಕಾಂಬಿಕಾರನ್ನು ವಿವಾಹವಾಗುವ ಮೂಲಕ ಸಾಂಸಾರಿಕ ಬದುಕನ್ನು ಆರಂಭಿಸುತ್ತಾರೆ. ಈ ಮದ್ದಾನೇಶ್ವರ ಹಾಗೂ ಕನಕಾಂಬಿಕಾರ ಮಗನಾಗಿ ಜನಿಸಿದವರೇ ಗೋಣಿಬಸವೇಶ್ವರರು.
ತನ್ನ ಕಾಯಕ ನಿಷ್ಠೆ ಹಾಗು ಆಪಾರ ಮಹಿಮೆಗಳ ಮೂಲಕ ಗೋಣಿಬಸವೇಶ್ವರರು ಬಹು ಬೇಗ ಜನಪ್ರೀಯತೆಗಳಿಸಿಕೊಳ್ಳುತ್ತಾರೆ.
ಅವರು ನಡೆಸಿದರು ಎನ್ನಲಾದ ಹತ್ತಾರು ಪವಾಡಗಳು ಗೋಣಿಬಸವೇಶ್ವರರ ಖ್ಯಾತಿಯನ್ನು ಲೋಕ ವಿಖ್ಯಾತಿವಾಗಿಸಿದವು.
ಪಂಚಗಣಾಧೀಶರರ ಮೂಲ ಮಂತ್ರ ಕಾಯಕ ಹಾಗು ಕೃಷಿ. ಗೋಣಿಬಸಪ್ಪನ ಸಾಹಸದ ಬೇಸಾಯದ ಬಗ್ಗೆ ಈಗಲೂ ಸಾಕಷ್ಟು ಐತಿಹ್ಯಗಳ ಬಗ್ಗೆ ಜನರು ಮಾತನಾಡುತ್ತಾರೆ.
ತಾನು ನೆಲಸಿದ್ದ ಕೂಲಹಳ್ಳಿಯ ಪರಿಸರದಲ್ಲಿನ ಚಿಕ್ಕಹಳ್ಳಿಯಲ್ಲಿ ವ್ಯವಸಾಯದಲ್ಲಿ ಮಗ್ನನಾಗಿದ್ದ ಸಂದರ್ಭದಲ್ಲಿ ಎದುರಿಗೆ ಬಂದ ಜೋಡಿ ಹುಲಿಗಳ ಹೆಗಲಿಗೆ ನೊಗ ಇಟ್ಟು, ನೇಗಿಲು ಹೊಡೆದ. ಹುಲಿಗಳನ್ನು ಬೇದರಿಸಲು ಸರ್ಪದ ಬಾರಕೋಲು ಬಳಸಿಕೊಂಡಿದ್ದ ಗೋಣಿಬಸಪ್ಪನ ಪವಾಡ ಈಗಲೂ ಕೇಳಲೂ ರೋಮಾಂಚಕವಾಗುತ್ತದೆ.
ಮೃದುಜೀವಿ ಅಳಿಲು ಚರ್ಮವನ್ನೇ ತೆಪ್ಪಮಾಡಿಕೊಂಡು, ಕೈಯಲ್ಲಿನ ಬೆತ್ತವನ್ನೇ ಹರಿಗೋಲು ಮಾಡಿಕೊಂಡು ರಭಸದಿಂದ ಹರಿಯುತ್ತಿದ್ದ ತುಂಗಭದ್ರಾ ನದಿಯನ್ನು ದಾಟಿ, ಆ ಕಡೆ ದಂಡೆಯ ಮೇಲಿನ ಮುಂಡರಗಿ ತಾಲ್ಲೂಕಿನ ಗುಮ್ಮಗೋಳ ಗ್ರಾಮಕ್ಕೆ ಗೋಣಿಬಸವೇಶ್ವರರು ತೆರಳಿ ಬೇಸಾಯ ಮಾಡುತ್ತಿದ್ದರು ಎನ್ನುವ ದಂತಕಥೆಗಳು ಈಗಲೂ ಜನರ ನಡುವೆ ಚಾಲ್ತಿಯಲ್ಲಿವೆ.
ಇನ್ನೂ, ಗೋಣಿಬಸವೇಶ್ವರರು ತಮ್ಮ ಕಾಯಕ ನಿಷ್ಠೆಯ ಮೂಲಕ ಬಹು ಜನಪ್ರಿಯತೆ ಯನ್ನುಗಳಿಸುತ್ತಾರೆ. ಇವರ ಖ್ಯಾತಿ ಹಲವರಿಗೆ ಮೈ ಊರಿತರಿಸುತ್ತದೆ. ಇಂತಹ ಹೊಟ್ಟೆ ಉರುಕರಲ್ಲಿ ಚಿಗಟೇರಿಯ ಶಿವನಯ್ಯ ಎಂಬ ಸಣ್ಣ ಸೈಜಿನ ಆಡಳಿಗಾರ ಒಬ್ಬ. ಭರ್ತಿಸುಣ್ಣ ತುಂಬಿದ ಗೋಣಿಚೀಲದಲ್ಲಿ ಗೋಣಿಬಸಪ್ಪನನ್ನು ಸುತ್ತಿ ಈಗಿನ ಹರಪನಹಳ್ಳಿ ಪಟ್ಟಣದ ಅಯ್ಯನಕೆರೆಗೆ ಹಾಕಿಸುತ್ತಾನೆ.
ನೀರಿಗೆ ಬಿದ್ದ ಸುಣ್ಣ ಕರಗಿದಂತೆ ಗೋಣಿಬಸಪ್ಪನ ದೇಹ ಕರಗುತ್ತದೆ ಎಂದು ಶಿನಯ್ಯನ ಲೆಕ್ಕಚಾರವಾಗಿರುತ್ತದೆ. ಆದರೇ ಮಹಾಮಹಿಮರಾಗಿದ್ದ ಗೋಣಿಬಸವೇಶ್ವರರು ನೀರಿನಲ್ಲಿ ಕರಗದೆ, ಅಲ್ಲಿಂದ ಜೀವ ಸಹಿತಅವತಾರ ಪುರುಷನಾಗಿ ಮತ್ತೆ ಎದ್ದು ಬರುತ್ತಾರೆ.
ಇಂತಹ ನೂರಾರು ಪವಾಡಗಳು ಗೋಣಿಬಸವೇಶ್ವರರು ಕಾಲವಾಗಿ ಐದು ಶತಮಾನಗಳು ಕಳೆದರೂ ಇನ್ನೂ ಕೂಡ ಅವರ ಹೆಸರು ಜನಮನದಾಳದಲ್ಲಿ ಗಟ್ಟಿಗೊಳ್ಳತ್ತಲೆ ಇದೆ. ಆತನನ್ನು ನೆನೆದರೇ ನಮ್ಮನ್ನು ಸಂಕಷ್ಟಗಳಿಂದ ರಕ್ಷಿಸುತ್ತಾನೆ, ಪಾರು ಮಾಡುತ್ತಾನೆ ಎಂಬ ಬಲವಾದ ನಂಬಿಕೆ ಭಕ್ತರಲ್ಲಿದೆ.
ಗೋಣಿಬಸವೇಶ್ವರರು ತಾವು ಬದುಕಿದ್ದ ಕಾಲದವರೆಗೂ ಯಾವುದೇ ಒಂದು ಜಾತಿ, ಪಂಥ ಹಾಗೂ ವರ್ಗಕ್ಕೆ ತಮ್ಮನ್ನು ಕಟ್ಟಿಕೊಳ್ಳಲಿಲ್ಲ. ಬದಲಿಗೆ ಸರ್ಹನ್ನೊಂದು ಜಾತಿ,ಪಂಥಗಳನ್ನು ಅವರು ತಮ್ಮ ತೆಕ್ಕೆಗೆ ಹಾಕಿಕೊಂಡು, ಬೆನ್ನಿಗೆ ಕಟ್ಟಿಕೊಂಡರು.ಹೀಗಾಗಿ ಗೋಣಿಬಸವೇಶ್ವರರು ಸಕಲ ಜಾತಿ, ಧರ್ಮಕ್ಕೂ ಬೇಕಾದ ಹಾಗೂ ಮೂಲತಃ ಕೃಷಿ ಸಂಸ್ಕೃತಿಯನ್ನು ಪ್ರೀತಿಸುವ ಆರಾಧ್ಯ ದೈವರಾದರು.
ಹೀಗಾಗಿ ಪ್ರತಿವರ್ಷ ಜರುಗುವ ರಥೋತ್ಸವ, ಕಾರ್ತೀಕೋತ್ಸವ, ಅಮಾವಾಸ್ಯೆ ಸಹಿತ ವಿಶೇಷ ದಿನಗಳಲ್ಲಿ ಕೂಲಹಳ್ಳಿಗೆ
ಸರ್ವ ಧರ್ಮದವರು ಸಕುಟುಂಬ ಪರಿವಾರ ಸಮೇತರಾಗಿ ಬಂದು ರಥೋತ್ಸವದಲ್ಲಿ ಭಾಗವಹಿಸುತ್ತಾರೆ.
ಬುಡಕಟ್ಟು ಸಾಂಸ್ಕೃತಿಕ ನಾಯಕರಾದ ಗೋಣಿಬಸವೇಶ್ವರರು ತಮ್ಮ ಕಾಯಕ ನಿಷ್ಠೆ, ಆಪಾರ ಪವಾಡ,ಮಹಿಮೆಗಳ ಮೂಲಕ ಪ್ರಸ್ತುತ ಲಕ್ಷಾಂತರ ಭಕ್ತಗಣವನ್ನೆ ಹೊಂದುವ ಮೂಲಕ ಕಲ್ಯಾಣ ಮತ್ತು ಮಧ್ಯ ಕರ್ನಾಟಕದ ಪರಿಧಿಯ ಸೀಮೆಗಳಲ್ಲಿ ಬಲು ಜನಪ್ರಿಯ ದೈವವಾಗಿ ಆರಾಧನೆಗೊಳ್ಳುತ್ತಿದ್ದಾರೆ.
ಗೋಣಿಬಸವೇಶ್ವರರು ಮಾಡಿದಂತಹ ಕೃಷಿ ಕುರಿತಂತೆ ನಮ್ಮ ಜನಪದರ ಮಧ್ಯೆ ಸಾಕಷ್ಟು ಐತಿಹ್ಯಗಳು, ಸಾಹಸಕಥೆಗಳು ಇಂದಿಗೂ ಜೀವಂತವಾಗಿವೆ. ಇವುಗಳನ್ನು ಸಂಗ್ರಹಿಸಿ, ಸಂಶೋಧನೆ ಮಾಡಿದರೆ ಜೋಡು ಹುಲಿಗೆ ನೊಗ ಕಟ್ಟಿ, ಸರ್ಪದ ಬಾರಕೋಲು ಮೂಲಕ ಬೇಸಾಯ ಮಾಡುತ್ತಿದ್ದ ಗೋಣಿಬಸವೇಶ್ವರರ ಸಾಹಸಮಯ ಕೃಷಿ ಮುಂದಿನ ಪೀಳಿಗೆಗೂ ಜೀವಂತವಾಗಿ ಉಳಿಯಲಿದೆ.
ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಗೋಣಿಬಸವೇಶ್ವರರ ಹೆಸರಿನಲ್ಲಿ ಪ್ರಾಧಿಕಾರ ರಚಿಸುವ ಮೂಲಕ ಕೃಷಿ ಸಂಸ್ಕೃತಿಯ ಆರಾಧಕರಾದ ಗೋಣಿಬಸವೇಶ್ವರರ ಇತಿಹಾಸವನ್ನು ಸಂರಕ್ಷಿಸುವ ಕಾರ್ಯಕ್ಕೆ ಮುಂದಾಗಬೇಕು ಎನ್ನುವುದು ಆತನ ಭಕ್ತರ ಆಶಯವಾಗಿದೆ.
- ಹುಳ್ಳಿಪ್ರಕಾಶ, ಸಂಪಾದಕರು, 9448234961

