- ಸುನಾಮಿನ್ಯೂಸ್, ಮಾರ್ಚ್,8
* ಹುಳ್ಳಿಪ್ರಕಾಶ, ಸಂಪಾದಕರು
‘ಯಮನೂರು ಜಾತ್ರೆ’ ಮತ್ತೆ ಬಂದಿದೆ. ಮಾರ್ಚ್ 8 ರಂದು ಜರುಗುವ ಮುಖ್ಯ ಉರುಸಿನಲ್ಲಿ ಪಾಲ್ಗೊಂಡು ಯಮನೂರುಸ್ವಾಮಿಯ ದರ್ಶನ ಪಡೆದು ಆತನ ಕೃಪೆಪಡೆದು, ಪುನೀತರಾಗಲು ಈಗಾಗಲೇ ಕರ್ನಾಟಕ ಸೇರಿದಂತೆ ಪಕ್ಕದ ಅಂಧ್ರ, ಮಹಾರಾಷ್ಟ್ರ ಸಹಿತ ನಾಡಿನಾದ್ಯಂತ ದಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ರಾಜಭಾಗ ಸವಾರ ಚಾಂಗದೇವರು ನೆಲಸಿರುವ ಯಮನೂರು ಪುಣ್ಯಕ್ಷೇತ್ರದಲ್ಲಿ ಮಹಾಸಂಗಮಿಸಿದ್ದಾರೆ.
ಯಮನೂರಿಗೆ ಸಂಪರ್ಕಿಸುವ ಎಲ್ಲಾ ರಸ್ತೆಗಳು, ಇಲ್ಲಿನ ಬೆಣ್ಣೆಹಳ್ಳದ ತೀರಾ ಪ್ರದೇಶದ ತುಂಬಲೂ ಚಾಂಗದೇವರ ಭಕ್ತರೇ ತುಂಬಿ, ತುಳುಕಾಡುತ್ತಿದ್ದಾರೆ. ಚಾಂಗದೇವರ ಪುಣ್ಯತಿಥಿಯನ್ನು ಯಮನೂರು ಉರುಸು ಎಂದು ಆಚರಣೆ ಮಾಡಲಾಗುತ್ತದೆ. ಇದು ಲೋಕ ವಿಖ್ಯಾತಿ ಪಡೆದುಕೊಂಡಿದೆ ಕೂಡ.
ಉರುಸು ನಿಂದ ಸತತ ಒಂದು ತಿಂಗಳ ಕಾಲದವರೆಗೂ ಯಮನೂರುಜಾತ್ರೆ ನಡೆಯುತ್ತದೆ ಎನ್ನುತ್ತಾರೆ ಸ್ಥಳಿಯರು. ಹಲವು ಕಾರಣಗಳಿಂದ ಉರುಸುನಲ್ಲಿ ಭಾಗಿಆಗಲು ಆಗದ ಭಕ್ತರು ನಂತರದ ದಿನಗಳಲ್ಲಿ ಪುಣ್ಯಕ್ಷೇತ್ರಕ್ಕೆ ಬಂದು ಸಕ್ಕರೆ ಹೊದಿಕೆ ಮಾಡಿಸಿ, ಅಂದುಕೊಂಡಷ್ಟು ಉಪ್ಪಿನ ಸೇವೆಯನ್ನು ಯಮನೂರಸ್ವಾಮಿಗೆ ಅರ್ಪಿಸುತ್ತಾರೆ. ಬಹಳಷ್ಟು ಭಕ್ತರು ಮಾಂಸಾಹಾರದ ನೈವೇದ್ಯದ ಮೂಲಕ ಚಾಂಗದೇವರಿಗೆ ತಮ್ಮ ಭಕ್ತಿಯನ್ನು ಸಮರ್ಪಿಸುತ್ತಾರೆ.
ಹಿಂದೂ ಮುಸ್ಲಿಂರು ಒಂದೂಗೂಡಿ ಆಚರಿಸುವ ಹಬ್ಬ,ಜಾತ್ರೆಗಳಿಗೆ ಕರ್ನಾಟಕದಲ್ಲಿ ಒಂದು ಉತ್ತಮ ನಿದರ್ಶನ ನೀಡುವುದಾದರೇ ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಯಮನೂರು ಗ್ರಾಮದಲ್ಲಿ ಜರುಗುವ’ಯಮನೂರು ಚಾಂಗದೇವನ ಜಾತ್ರೆ’ ಯು ಉತ್ತಮ ಉದಾಹರಣೆಯು ಹೌದಾಗಿದೆ.
ಆಗೇನೆ ಈ ನಾಡಿನ ಭಾವ್ಯಕ್ಯತೆಯ ಪ್ರಮುಖವಾದ ಕೇಂದ್ರವೂ ಯಮನೂರು ಕ್ಷೇತ್ರವಾಗಿದೆ.
ಯಮನೂರು, ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಮಾರ್ಗಕ್ಕೆ ತಾಗಿಕೊಂಡಿರುವ ಪುಟ್ಟ ಗ್ರಾಮ. ಈ ಗ್ರಾಮದಲ್ಲಿ ಮಹಾಮಹಿಮರಾದ ಚಾಂಗದೇವರು ನೆಲಸಿರುವ ಕಾರಣಕ್ಕೇನೆ ನಾಡಿನಾದ್ಯಂತ ‘ಯಮನೂರುಸ್ವಾಮಿ’ ಆಗಿಯೇ ಚಾಂಗದೇವರು ಆರಾಧಿಸಲ್ಪಡುತ್ತಿದ್ದಾರೆ. ಬಡವ, ಬಲ್ಲಿದ ಎನ್ನದೆ, ಜಾತಿ, ಧರ್ಮಗಳ ಬೇಧವಾವ ಎಣಿಸದಂತೆ ಲಕ್ಷಾಂತರ ಭಕ್ತರ ಸಮೂಹವನ್ನೆ ಯಮನೂರು ಸ್ವಾಮಿ ಹೊಂದಿದ್ದಾನೆ. ಯಮನವ್ವ, ಯಮುನಮ್ಮ, ಯಮನಪ್ಪ, ಯಮನೂರಪ್ಪ, ಯಮನೂರಿ, ಯಮನೂರುಸ್ವಾಮಿ ಹೀಗೆ ನಾಮಾಂಕಿತ ಹೊಂದಿದವರು ಈ ನಾಡಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಹಿಂದೂ ಮುಸ್ಲಿಂರ ಭಾವ್ಯಕ್ಯತೆಯನ್ನು ಜಗತ್ತಿಗೆ ಸಾರಿ ಹೇಳಿದ ಮಹಾ ಮಹಿಮಾ ಪುರುಷರಾದ ಚಾಂಗದೇವರು ಹುಲಿಯನ್ನೇ ತಮ್ಮ ವಾಹನವನ್ನಾಗಿ ಮಾಡಿಕೊಂಡು, ಸರ್ಪವನ್ನೇ ಚಾವಟಿ ಆಗಿಸಿಕೊಂಡು, ಚೇಳುಗಳನ್ನೇ ಮುಗುದಾರವನ್ನಾಗಿ ಮಾಡಿಕೊಂಡು ಲೋಕಸಂಚಾರಿಸುತ್ತಾ ಚಾಂಗದೇವರು ಬೆಣ್ಣೆಹಳ್ಳದ ತಟದಲ್ಲಿರುವ ಯಮನೂರಿಗೆ ಬಂದು ನೆಲೆಸಿ, ಸಮಾಜದಲ್ಲಿ ಭಾವೈಕ್ಯತೆಯ ತತ್ವದಸಾರವನ್ನು ಸಾರಿದರು.
ತಮ್ಮ ಪವಾಡ ಶಕ್ತಿಯ ಮೂಲಕ ಮಹಾ ಮಹಿಮಾ ಪುರುಷು ಆದ ಇವರನ್ನು “ರಾಜಾ ಬಾಗಸವಾರ” ಎಂದು ಭಕ್ತರು ಸ್ಮರಿಸುತ್ತಾರೆ. ಯಮನೂರುಸ್ವಾಮಿ ನೆಲಸಿರುವ ಈ ಪುಣ್ಯಕ್ಷೇತ್ರದಲ್ಲಿ ನರಸಿಂಹ ಮೂರ್ತಿ, ಸಾಲಿಗ್ರಾಮ ಹಾಗು ಪಂಜಾಗಳನ್ನು ಪ್ರತಿಷ್ಠಾಪಿಸಲಾಗಿದೆ. ಹೀಗಾಗಿ ಈ ಪುಣ್ಯಕ್ಷೇತ್ರ ಹಿಂದುಗಳಿಗೆ ಯಮನೂರುಸ್ವಾಮಿ ದೇವಸ್ಥಾನವಾಗಿ ಇತ್ತ ಮುಸ್ಲಿಂರಿಗೆ ದರ್ಗಾ ಆಗಿಯೂ ಆರಾಧನೆಗೊಳ್ಳುತ್ತಿರುವುದು ವಿಶೇಷದಲ್ಲಿ ವಿಶೇಷವಾಗಿದೆ.
ಯಮನೂರಿನ ಪಕ್ಕದಲ್ಲಿಯೇ ಬೆಣ್ಣೆ ಹಳ್ಳ ಹರಿಯುತ್ತದೆ. ಈ ಹಳ್ಳದ ನೀರಿನಿಂದಲೇ ಚಾಂಗದೇವರು ದೀಪ ಬೆಳಗಿಸುತ್ತಿದ್ದರು ಎನ್ನುವ ಪ್ರತೀತಿ ಬಹು ಶತಮಾನಗಳಿಂದಲೂ ಇದೆ. ಈಗಲೂ ಉರುಸಿನ ಸಮಯದಲ್ಲಿ ಈ ಹಳ್ಳದ ನೀರಿನಿಂದಲೇ ದೀಪವನ್ನು ಬೆಳಗಿಸಲಾಗುತ್ತದೆ. ಕಲಿಯುಗದಲ್ಲಿನ ಈ ಮಹಾನ ವಿಸ್ಮಯವನ್ನು ಕಣ್ಣಾರೇ ಕಂಡು ಪುನೀತರಾಗಬೇಕೆನ್ನುವ ಹಂಬಲ ಪ್ರತಿಯೋಬ್ಬ ಭಕ್ತರದ್ದಾಗಿದ್ದು ಈ ಕಾರಣಕ್ಕೇನೆ ಬಹುತೇಕರು ಚಾಂಗದೇವರ ಉರುಸಿಗೆ ಯಮನೂರಿಗೆ ಧಾವಿಸಿ ಬರುತ್ತಾರೆ.
ಬೆಣ್ಣೆ ಹಳ್ಳದ ನೀರಿನಲ್ಲಿ ಸ್ನಾನ ಮಾಡಿ ಚಾಂಗದೇವರನ್ನು ನೆನೆದರೆ ಯಾವುದೇ ತರಹದ ಚರ್ಮರೋಗ ನಿವಾರಣೆಯಾಗುತ್ತದೆ ಎನ್ನುವ ಬಲವಾದ ನಂಬಿಕೆ ಜನತೆಯಲ್ಲಿ ಗಟ್ಟಿಯಾಗಿ ಮನೆಮಾಡಿದೆ. ಈ ಬಲವಾದ ನಂಬಿಕೆ ಹಳ್ಳಿ ಯಿಂದ ಡಿಲ್ಲಿತನಕವೂ ಹರಡಿದ್ದು ಈ ಕಾರಣಕ್ಕೇನೆ ಚಾಂಗದೇವರ ಭಕ್ತರ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಇತ್ತ ಯಮನೂರುಸ್ವಾಮಿ ಅವರ ಮಹಿಮೆಯು ನಾಡಿನಾದ್ಯಂತ ವ್ಯಾಪಕ ಪ್ರಮಾಣದಲ್ಲಿಯೇ ವ್ಯಾಪಿಸುತ್ತಲೇ ಇದೆ.
- ಹುಳ್ಳಿಪ್ರಕಾಶ, ಸಂಪಾದಕರು,9448234961

