ಮತ ದಿನ ಘೋಷಣೆ. ಬಿರುಸುಗೊಂಡ ಲೋಹಾದ್ರಿ ಸೀಮೆಯ ರಾಜಕಾರಣ
———— ಹುಳ್ಳಿಪ್ರಕಾಶ, ಸಂಪಾದಕರು.
ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ದಿನಾಂಕವನ್ನು ಇಂದು( ಅ,15) ಮಧ್ಯಾಹ್ನ ಕೇಂದ್ರ ಚುನಾವಣಾ ಆಯೋಗ ಅಧಿಕೃತವಾಗಿ ಘೋಷಣೆ ಮಾಡಿದೆ.
ಮತದಾನದ ದಿನದ ಘೋಷಣೆಯ ಬೆನ್ನಲ್ಲೆ ಉಪಸಮರವನ್ನು ಗೆಲ್ಲಲ್ಲು ಈ ತನಕವೂ ತೆರೆಮರೆಯಲ್ಲಿಯೇ ನಡೆಯುತ್ತಿದ್ದ ಸಮರಭ್ಯಾಸ ಈಗ ಬಹಿರಂಗಕ್ಕೆ ಬಂದು ನಿಂತಿದೆ. ಅಗತ್ಯಕ್ಕೂ ಹೆಚ್ಚೇ ಎನ್ನುವಷ್ಟರ ಮಟ್ಟಿಗೆ ರಾಜಕೀಯ ಚಟುವಟಿಕೆಗಳು ಲೋಹಾದ್ರಿಯ ನಾಡಿನಾದ್ಯಂತ ಗರಿಬಿಚ್ಚಿಕೊಳ್ಳುವಂತಾಗಿದೆ.
ಕ್ಷೇತ್ರ ಪುನರ್ ವಿಂಗಡಣೆ ಬಳಿಕ 2008 ರಿಂದ ಈ ಕ್ಷೇತ್ರ ಪರಿಶಿಷ್ಟ ಪಂಗಡ(ಎಸ್ಟಿ)ಗೆ ಮೀಸಲಾಯ್ತು. ಅಲ್ಲಿಂದ ಈ ತನಕ ಅಂದರೇ 2023ರ ಮೇ ತಿಂಗಳಿನಲ್ಲಿ ಜರುಗಿದ ಚುನಾವಣೆಯ ವರೆಗೂ ಸತತ ನಾಲ್ಕು ಸಲ ಈ.ತುಕಾರಾಂ ರವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿಕೊಂಡು ಬಂದಿದ್ದರು.
ಈ ಕ್ಷೇತ್ರದ ಮಟ್ಟಿಗೆ ಇದೊಂದು ದಾಖಲೆ ಕೂಡ. ಏಕೆಂದರೆ, ಮಾಜಿ ಮಹಾರಾಜ ಎಂವೈ.ಘೋರ್ಪಡೆ ತರುವಾಯ ಸಂಡೂರು ಕ್ಷೇತ್ರ ದಿಂದ ಹೆಚ್ಚಿನ ಸಲ ರಾಜ್ಯದ ಕೆಳಮನೆಯ ಶಾಸನಸಭೆಗೆ ಆಯ್ಕೆಯಾದ ಏಕೈಕ ಜನಪ್ರತಿನಿಧಿ ಎನ್ನುವ ದಾಖಲೆ ಈ.ತುಕಾರಾಂ ಹೆಸರಿನಲ್ಲಿ ದಾಖಲಾಗಿದೆ.
2024ರ ಮೇ ತಿಂಗಳಿನಲ್ಲಿ ಜರುಗಿದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ
ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ತುಕಾರಾಂ ಅವರನ್ನೇ ಬಿಜೆಪಿಯ ಶ್ರೀರಾಮುಲು ಎದುರು ಅಖಾಡಕ್ಕೀಳಿಸಿತು. ಸರಳ ಜೀವನಶೈಲಿ, ಕ್ಲಿನ್ ಇಮೇಜ್ ಗಳು ಈ.ತುಕಾರಾಂ ಅವರನ್ನು ಗೆಲುವಿನ ದಡ ಹತ್ತಿಸುವಂತೆ ಮತದಾರರನ್ನು ಪ್ರೇರಣೆಗೊಳಿಸಿದವು.
ಭಾರೀ ಲೀಡ್ ನೊಂದಿಗೆ ಅವರು ಪಾರ್ಲಿಮೆಂಟ್ ಗೆ ಆಯ್ಕೆಗೊಂಡರು. ಇಪ್ಪತ್ತು ವರ್ಷಗಳ ನಂತರ ಬಳ್ಳಾರಿಯಲ್ಲಿ ಕಾಂಗ್ರೆಸ್ ಪಕ್ಷ ತುಕಾರಾಂ ನೆರವಿನೊಂದಿಗೆ ಗೆಲುವಿನ ನಗೆ ಬೀರುವಂತಾಯ್ತು.
ಅವರು ಪಾರ್ಲಿಮೆಂಟ್ ಮೆಂಬರ್ ಆಗಿದ್ದರಿಂದ ಸತತ ನಾಲ್ಕು ಅವಧಿಯಿಂದಲೂ ಶಾಸಕರಾಗಿ ಗೆಲ್ಲುತ್ತಾ ಬಂದಿದ್ದ ಅದೃಷ್ಟದ ಮತಕ್ಷೇತ್ರಕ್ಕೆ ರಾಜೀನಾಮೆ ನೀಡುವುದು ಅವರಿಗೆ ಅನಿವಾರ್ಯವಾಗಿತ್ತು. ಹೀಗಾಗಿ ರಾಜಕೀಯ ಜನ್ಮ ಕೊಟ್ಟ ಕ್ಷೇತ್ರಕ್ಕೆ ವಿದಾಯ ಸಲ್ಲಿಸಿದ್ದರು.
ಅವರ ರಾಜೀನಾಮೆ ಯಿಂದ ತೆರವುಗೊಂಡಿದ್ದ ಸಂಡೂರು ವಿಧಾನಸಭಾ ಕ್ಷೇತ್ರಕ್ಕೆ ನವೆಂಬರ್ ಹದಿಮೂರ ರಂದು ಉಪ ಚುನಾವಣೆಯ ದಿನಾಂಕವನ್ನು ನಿಗದಿ ಪಡಿಸಿ ಕೇಂದ್ರ ಚುನಾವಣಾ ಆಯೋಗ ಅಧಿಕೃತವಾಗಿ ಘೋಷಣೆ ಮಾಡಿದೆ.
ಇದೇ ದಿನ ದಂದೇ ಕೇಂದ್ರ ಸಚಿವರಾದ, ಮಂಡ್ಯ ಕ್ಷೇತ್ರದ ಸಂಸದರಾದ ಹೆಚ್.ಡಿ.ಕುಮಾರಸ್ವಾಮಿ ಅವರ ರಾಜೀನಾಮೆ ಯಿಂದ ತೆರವಾಗಿರುವ ಚನ್ನಪಟ್ಟಣ ಹಾಗೂ ಹಾವೇರಿ ಲೋಕಸಭಾ ಸದಸ್ಯರಾದ ಕಾರಣಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ರಾಜೀನಾಮೆ ಸಲ್ಲಿಸಿರುವ ಶಿಗ್ಗಾಂವ ಕ್ಷೇತ್ರಗಳಿಗೂ ಉಪ ಚುನಾವಣೆ ಜರುಗಲಿದೆ.
- ಹುಳ್ಳಿಪ್ರಕಾಶ, ಸಂಪಾದಕರು.