* ಸುನಾಮಿನ್ಯೂಸ್, ಮೇ,15
ಪೂರ್ವ ಮುಂಗಾರು ಭರ್ಜರಿ ಅಬ್ಬರಿಸಿದ ಪರಿಣಾಮ ಗುರುವಾರ ಬೆಳಿಗ್ಗೆ ಹಗರಿಬೊಮ್ಮನಹಳ್ಳಿ ತಾಲೂಕಿನ ದಶಮಾಪುರ ಗ್ರಾಮದ ಹೊರವಲಯದ ಬಳಿ ಹರಿಯುವ ಹಿರೇಹಳ್ಳ ಉಕ್ಕಿ ಹರಿಯಿತು. ಇದರಿಂದಾಗಿ ಈ ಮಾರ್ಗದಲ್ಲಿಯೇ ಸಾಗುವ ತೊರಣಗಲ್ಲು- ಮೈಲಾರ ರಾಜ್ಯ ಹೆದ್ದಾರಿ ಮೇಲೆ ಮೂರು ಅಡಿಗೂ ಎತ್ತರ ಪ್ರಮಾಣದಲ್ಲಿ ಮಳೆ ನೀರು ಹರಿದಿದ್ದರಿಂದ ಸತತ ಎರಡು ಗಂಟೆಗಳ ಕಾಲ ಹೆದ್ದಾರಿ ಮೇಲೆ ಸಂಚಾರಬಂದ್ ಆಗಿ, ಸಂಚಾರದಲ್ಲಿ ಅಸ್ತವ್ಯಸ್ತ್ಯ ಉಂಟಾಯಿತು. ಮಧ್ಯಾಹ್ನದ ನಂತರ ನೀರಿನ ಹರಿಯುವ ಪ್ರಮಾಣ ತಗ್ಗಿದ ಬಳಿಕ ಹೆದ್ದಾರಿ ಮೇಲೆ ಸಂಚಾರ ಸಹಜ ಸ್ಥಿತಿಗೆ ಬಂತು.
ಹಳ್ಳದಲ್ಲಿ ಮೂರು ಅಡಿ ಎತ್ತರದ ಪ್ರಮಾಣದಲ್ಲಿ ಮಳೆ ನೀರು ರಭಸವಾಗಿ ದಿಢೀರನ್ನೆ ಹರಿಯುತ್ತೀದ್ದರಿಂದ ಬೆಳಗ್ಗೆ ಹೊಲ,ಗದ್ದೆ,ತೋಟಗಳಿಗೆ ಹೋಗುವ ರೈತರು, ಕೂಲಿಕಾರ್ಮಿಕರು ಹಳ್ಳ ಧಾಟಲು ಸಾಕಷ್ಟು ಪರದಾಡಿದರು. ಬೈಕ್ ವೊಂದು ಹಳ್ಳದ ನೀರಿನಲ್ಲಿ ತೇಲಿ ಹೋಗಿದ್ದು ಬಿಟ್ಟರೆ ಯಾವುದೇ ಹಾನಿ ಸಂಭವಿಸಿದ ಪ್ರಕರಣಗಳು ದಾಖಲಾಗಿಲ್ಲ.
ದಶಮಾಪುರ ಬಳಿ ಇರುವ ಗುಡ್ಡದ ತಿಮ್ಮಪ್ಪನ ಕಾದಿಟ್ಟ ಅರಣ್ಯ ಹಾಗೂ ಚಿಲಕನಹಟ್ಟಿ ಕಾದಿಟ್ಟ ಅರಣ್ಯ ಪ್ರದೇಶಗಳಲ್ಲಿ ಮಂಗಳವಾರ ದಿಂದಲೇ ಭರ್ಜರಿ ಮಳೆ ಸುರಿಯುತ್ತಿದೆ. ಗುರುವಾರ ಬೆಳಗಿನ ಜಾವದಲ್ಲಿ ಪೂರ್ವ ಮುಂಗಾರು ಅಗತ್ಯಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ಗುಡುಗು, ಮಿಂಚು, ಸಿಡಿಲಿನ ಆರ್ಭಟದೊಂದಿಗೆ ಅಬ್ಬರಿಸಿತು. ಇದರಿಂದಾಗಿ ಅರಣ್ಯದ ಮೂಲಕ ಹರಿದು ಬರುವ ಹಿರೇಹಳ್ಳ ಇದ್ದಕ್ಕಿದ್ದಂತೆ ಪ್ರವಾಹ ರೂಪದಲ್ಲಿ ಮೈತುಂಬಿಕೊಂಡು ಭೋರ್ಗೆರೆಯಿತು.
- ಕುಣಿದಾಡಿದ ಮಕ್ಕಳು: ಗ್ರಾಮದ ಜನತೆ ಹಾಗೂ ಹೆದ್ದಾರಿ ಮೇಲೆ ಸಾಗುವ ವಾಹನ ಸವಾರರು, ಪ್ರಯಾಣಿಕರು ಹಿರೇಹಳ್ಳ ಜಲಪಾತಯೋಪಾದಿಯಲ್ಲಿ ತುಂಬಿ ಹರಿಯುತ್ತಿದ್ದ ದೃಶ್ಯವನ್ನು ಕಣ್ಣತುಂಬಿಕೊಂಡು, ಸೆಲ್ಫಿ ಕ್ಲಿಕಿಸಿಕೊಂಡು ಸಂತಸಪಟ್ಟರು.
ಶಾಲೆಗೆ ರಜಾ ಇದ್ದಿದ್ದರಿಂದಾಗಿ ಮಕ್ಕಳು ಮಧ್ಯಾಹ್ನದ ತನಕವೂ ಧುಮ್ಮಿಕ್ಕುವ ಹಳ್ಳದ ನೀರಿನಲ್ಲಿ ಈಜಾಡಿ, ಕುಣಿದಾಡಿ, ಮೀನುಗಳನ್ನು ಹಿಡಿದು ಬೇಸಿಗೆ ರಜೆಯನ್ನು ಮಜಾವಾಗಿಸಿಕೊಂಡು ಖುಷಿ ಅನುಭವಿಸಿದರು.
ಅರಣ್ಯ ಪ್ರದೇಶದಲ್ಲಿ ತಿಮ್ಮಪ್ಪನ ಗುಡ್ಡದ ಸಾಲುಗಳೇ ಇದ್ದು ಮಳೆಗಾಲ ಚೆನ್ನಾಗಿ ಆದರೇ ಹಿರೇಹಳ ಹತ್ತು ತಿಂಗಳ ಕಾಲ ಹರಿದಿರುವ ಇತಿಹಾಸವೂ ಇದೆ. ತಾಲೂಕಿನ ಐತಿಹಾಸಿಕ ಚಿಂತ್ರಪಳ್ಳಿ ಕೆರೆಗೆ ಪ್ರಮುಖ ಜಲ ಮೂಲವೂ ಇದೇ ಹಳ್ಳ ಎಂದರು ಹಗರಿಬೊಮ್ಮನಹಳ್ಳಿ ಪಟ್ಟಣ ದಿಂದ ಹಳ್ಳ ವೀಕ್ಷಣೆಗೆ ಬಂದಿದ್ದ ನಾಣಿಕೆರಿ ದೈವಸ್ಥರ ಮುಖಂಡರಾದ ಬಾರಿಕರ ಬಾಪೂಜಿ.
ಗುರುವಾರ ಬೆಳಗಿನ ಜಾವ ಹಗರಿಬೊಮ್ಮನಹಳ್ಳಿ ಪಟ್ಟಣ ಸಹಿತ ತಾಲೂಕಿನ ದಶಮಾಪುರ, ಆನೆಕಲ್ಲು, ಆನೆಕಲ್ಲು ತಾಂಡ, ಬಲ್ಲಾಹುಣ್ಸಿ, ಹೊಸಕೆರೆ,ನಾಣ್ಯಾಪುರ, ಮಾದೂರು, ಪಿಲ್ಲೋಬನಹಳ್ಳಿ, ಕೆಚ್ಚಿನಬಂಡಿ, ಬಲ್ಲಾಹುಣ್ಸಿ, ವಲ್ಲಾಭಾಪುರ ಸಹಿತ ಹಲವು ಕಡೆಗಳಲ್ಲಿ ಹದವಾಗಿ, ಭರ್ಜರಿಯಾಗಿ ಮಳೆ ಸುರಿದು ಇಳೆಯನ್ನು ತಂಪಾಗಿಸಿತು.
- ಹುಳ್ಳಿಪ್ರಕಾಶ, ಸಂಪಾದಕರು