- ಸುನಾಮಿನ್ಯೂಸ್, ಮೇ,17
——- ಹುಳ್ಳಿಪ್ರಕಾಶ, ಸಂಪಾದಕರು.
ಸದ್ಯ ಶಾಸಕ ಸ್ಥಾನ ದಿಂದ ಅನರ್ಹತೆಗೊಂಡಿರುವ ಗಾಲಿ ಜನಾರ್ಧನರೆಡ್ಡಿ ಪ್ರತಿನಿಧಿಸುತ್ತಿದ್ದ ಕೊಪ್ಪಳ ಜಿಲ್ಲೆಯ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಉಪ ಚುನಾವಣೆ ಜರುಗಿದರೇ, ನಾವೇ ಗೆಲ್ಲುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಕೊಪ್ಪಳ ಪ್ರವಾಸದಲ್ಲಿ ಮಾಧ್ಯಮದವರ, ಬೈ ಎಲೇಕ್ಷನ್ ಸಂಬಂಧಿಸಿದ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
ಕಳೆದ ವರ್ಷ ಜರುಗಿದ ಶಿಗ್ಗಾಂವ್, ಸಂಡೂರು, ಚನ್ನಪಟ್ಟಣ ಕ್ಷೇತ್ರಗಳ ಉಪಸಮರದಲ್ಲಿ ಜಯಭೇರಿ ಬಾರಿಸಿರುವ ಸಿಎಂ ಅದೇ ಹುಮ್ಮಸ್ಸಿನಲ್ಲಿ ಭತ್ತದ ಕಣಜದ ಮೇಲೂ ವಿಜಯ ಪತಾಕೆ ಹಾರಿಸುವ ವಿಶ್ವಾಸ ವ್ಯಕ್ತಪಡಿಸಿರುವುದು ಸಹಜವೇ.
ಆದರೇ ಗಂಗಾವತಿ ಕ್ಷೇತ್ರದಲ್ಲಿ
ಕಾಂಗ್ರೆಸ್ ಪಕ್ಷ ಗೆಲುವಿನ ರುಚಿ ನೋಡಿಯೇ ಬರೋಬ್ಬರಿ ಎರಡೂವರೇ ದಶಕಗಳ ಕಾಲವಾಯ್ತು! ಈ ಅವಧಿಯಲ್ಲಿ ಒಂದೇರೆಡು ಬಾರಿ ಮೂರನೇ ಸ್ಥಾನಕ್ಕೂ ಕಾಂಗ್ರೆಸ್ ಸಾಧನೆ ಇಳಿದಿದೆ ಕೂಡ!
ಯಸ್, ಕರ್ನಾಟಕದಲ್ಲಿ ಎರಡು ಸಲ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯರ ಹವಾ ಕಾರಣವಾದ್ರೇ, ಇತ್ತ ಗಂಗಾವತಿಯಲ್ಲಿ ಸಿದ್ದು ಬಲ ಕೈ ಪಕ್ಷಕ್ಕೆ ವರ್ಕೌಟೇ ಆಗಿಲ್ಲ ಎನ್ನುವುದು ಬಲು ಇಂಟರೆಸ್ಟಿಂಗ್ ಆಗಿದೆ.
ಭತ್ತದ ಕಣಜ ಎಂದೇ ಲೋಕಖ್ಯಾತಿಯ ಗಂಗಾವತಿ ಕ್ಷೇತ್ರ 1999ರ ವರೆಗೂ ಕಾಂಗ್ರೆಸಿನ ಭದ್ರಕೋಟೆ ಆಗಿತ್ತು. ಆದರೇ 2004ರಲ್ಲಿ ಜೆಡಿಎಸ್ ನಿಂದ ಕಣಕ್ಕೀಳಿದಿದ್ದ ಇಕ್ಬಾಲ್ ಅನ್ಸಾರಿ ಕೈ ಕೋಟೆಯನ್ನು ಛೀದ್ರಗೊಳಿಸಿದರು. ಅವತ್ತು ಸೋಲಿನ ಮನೆ ಸೇರಿದ ಕಾಂಗ್ರೆಸ್ ಇನ್ನೂ ಕೂಡ ಗೆಲುವಿನ ಪಸೆ ಕಾಣಲಾಗುತ್ತಿಲ್ಲ. ಸ್ವತಹ ಅನ್ಸಾರಿಯೇ ಕಾಂಗ್ರೆಸ್ ಸೇರಿ ಸತತ ಎರಡು ಸಲ ಕೈ ಅಭ್ಯರ್ಥಿ ಆದರೂ ಗಂಗಾವತಿ ಮತದಾರರ ಓಲವು ಮಾತ್ರ ಕಾಂಗ್ರೆಸ್ ಪರವಾಗಲಿಲ್ಲ.
ಇನ್ನೂ, 90ರ ದಶಕದಲ್ಲಿ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಎನ್ನುವುದು ಮಾಜಿ ಸಂಸದ ಹೆಚ್.ಜಿ.ರಾಮುಲು ಅವರ ಸ್ವಂತ ಆಸ್ತಿ ತರಹವೇ ಆಗಿತ್ತು. ಅವರ ಸಾರ್ವಧಿಕಾರಿತನದ ರಾಜಕಾರಣಕ್ಕೆ ಸೆಡ್ಡು ಹೊಡೆದು ಕಾಂಗ್ರೆಸಿನಿಂದ ಹೊರಗೆ ಬಂದಿದ್ದ ಇಕ್ಬಾಲ್ ಅನ್ಸಾರಿ ಜೆಡಿಎಸ್ ಟಿಕೆಟ್ ಪಡೆದುಕೊಂಡ್ರು.
ಆಗ ಕಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದ ಖುದ್ದು ಹೆಜ್.ಜಿ.ರಾಮುಲು ಪುತ್ರ ಮಾಜಿ ಎಮ್ಮೇಲ್ಸಿ ಹೆಚ್.ಆರ್.ಶ್ರೀನಾಥರನ್ನೇ ಮೂರನೇಯ ಸ್ಥಾನಕ್ಕೆ ತಳ್ಳಿ, ಮೊದಲ ನೆಗೆತದಲ್ಲಿಯೇ ವಿಧಾನಸಭೆಗೆ ಹಾರಿದ್ದಲ್ಲದೆ ಕುಮಾರಸ್ವಾಮಿ ಸರ್ಕಾರದಲ್ಲಿ ಸಂಪುಟದರ್ಜೆ ಸಚಿವ ಸ್ಥಾನದ ಬಂಪರ್ ಲಾಟ್ರೀ ಹೊಡೆದುಕೊಂಡ್ರು.
2008ರ ಕ್ಷೇತ್ರ ಪುನರ್ ವಿಂಗಡಣೆ ತರುವಾಯ ಈ ಕ್ಷೇತ್ರದಲ್ಲಿ ನಾಲ್ಕು ಸಲ ಜರುಗಿರುವ ಚುನಾವಣೆಯಲ್ಲಿ ಬಿಜೆಪಿ ಎರಡು ಬಾರಿ, ಜೆಡಿಎಸ್ ಮತ್ತು ಜನಾರ್ಧನರೆಡ್ಡಿ ಸ್ಥಾಪಿತ ಕೆಕೆಆರ್ ಪಿಪಿ ಪಕ್ಷಗಳು ತಲಾ ಒಂದೊಂದು ಸಲ ಗೆಲುವಿನ ಮಾಲೆ ಧರಿಸಿವೆ. ಕ್ಷೇತ್ರದ ಮತದಾರ ಕಾಂಗ್ರೆಸ್ ನ್ನು ಇನ್ನೂ ಶೂನ್ಯಕ್ಕೆ ಸೀಮಿತವಾಗಿಸಿದ್ದಾನೆ!
ಪಕ್ಷದಲ್ಲಿನ ನಾಯಕರ ನಡುವಿನ ಅಂತರೀಕ ಕಚ್ಚಾಟಗಳು, ಜಾತಿ ಮೇಲಾಟಗಳು ಈ ಕ್ಷೇತ್ರದಲ್ಲಿ ಕೈ ಪಕ್ಷದ ಸೋಲಿನಲ್ಲಿ ಪ್ರಮುಖಪಾತ್ರಧಾರಿಗಳಾದರೇ, ಇತ್ತ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಬಳಿಕವಂತೂ ಪಕ್ಷದಲ್ಲಿ ಭಿನ್ನಾಭಿಪ್ರಾಯಗಳ ಸಾಲುಗಳೇ ಹುಟ್ಟಿಕೊಂಡವು. ಉಲ್ಬಣಿಸಿದ ಕಿತ್ತಾಟಗಳು ಕ್ಷೇತ್ರದಲ್ಲಿ ಕಾಂಗ್ರೆಸಿನ ಸ್ಥಿತಿಯನ್ನು ಮತ್ತಷ್ಟು ಶೋಚನೀಯ ನಿಲ್ದಾಣಕ್ಕೆ ತಂದು ನಿಲ್ಲಿಸಿದೆ!
2018 ಮತ್ತು 2023 ರಲ್ಲಿ ಸತತ ಎರಡು ಬಾರಿ ಸಿದ್ದರಾಮಯ್ಯ ಕೃಪಾಕಟಾಕ್ಷದೊಂದಿಗೆ ಕೈ ಪಕ್ಷದ ಅಭ್ಯರ್ಥಿಯಾದರೂ ಇಕ್ಬಾಲ್ ಅನ್ಸಾರಿಗೆ ಕ್ಷೇತ್ರದ ಮತದಾರರು ಮಾತ್ರ ಕೈಹಿಡಿಯಲಿಲ್ಲ. 2023ರ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯ ಮತಗಳು ಭಾರೀ ಪ್ರಮಾಣದಲ್ಲಿಯೇ ಜನಾರ್ಧನರೆಡ್ಡಿ ಪರವಾಗಿ ವಲಸೆ ಬಂದವು. ಇದನ್ನು ನೋಡಿದರೇ ಅನ್ಸಾರಿ ಅವರಿಗೆ ತನ್ನ ಸಮುದಾಯದ ಮತಗಳ ಮೇಲೆ ಹಿಡಿತ ಇಲ್ಲಾ ಎನ್ನುವುದರ ಸಂಕೇತವೂ ಹೌದು.
ಎರಡು ಬಾರಿ ಶಾಸಕರಾಗಿ ಅನ್ಸಾರಿಗೆ ವಿಧಾನಸಭೆಯ ಪ್ರವೇಶ ಸಿಕ್ಕಿದ್ದು ಹಾಗು ಒಂದು ಸಲ ಸಂಪುಟದರ್ಜೆ ಸಚಿವ ಸ್ಥಾನ ಬಂದಿದ್ದು ಮಾಜಿ ಪ್ರಧಾನಿ ದೇವೆಗೌಡರ ಜೆಡಿಎಸ್ ಪಕ್ಷ ದಿಂದ ಎನ್ನುವುದು ವಿಶೇಷ. ಜೆಡಿಎಸ್ ನಲ್ಲಿದ್ದಾಗ ಲಕ್ಕಿ ಆಗಿದ್ದ ಅನ್ಸಾರಿ, ಕೈ ಹಿಡಿಯುತ್ತಲೇ ಅನ್ ಲಕ್ ಆಗಿಬಿಟ್ರು!
* ರೆಡ್ಡಿ ಬಂಧನ:
ಈ ಕಥೆ ಇಷ್ಟಾದರೇ, ಇತ್ತ ಆಕ್ರಮ ಗಣಿಗಾರಿಕೆ ಆರೋಪದಡಿ ಏಳು ವರ್ಷ ಶಿಕ್ಷೆಗೆ ಗುರಿಯಾಗಿ, ಶಾಸಕ ಸ್ಥಾನ ದಿಂದ ಶಾಸಕ ಗಾಲಿ ಜನಾರ್ಧನರೆಡ್ಡಿ ಸದ್ಯ ಅನರ್ಹತೆಗೊಂಡಿದ್ದಾರೆ. ಸಿಬಿಐ ವಿಶೇಷ ನ್ಯಾಯಾಲಯ ದಿಂದ ಶಿಕ್ಷೆಯ ತೀರ್ಪು ಪ್ರಕಟವಾದ ಮರುಗಳಿಗೆಯೇ ಕೆಕೆಪಿಪಿಆರ್ ಪಕ್ಷದ ಸಂಸ್ಥಾಪಕರು, ಪ್ರಸ್ತುತ ಬಿಜೆಪಿಯಲ್ಲಿರುವ ಗಾಲಿ ಜನಾರ್ಧನರೆಡ್ಡಿ ಅವರನ್ನು ಸಿಬಿಐ ಬಂಧಿಸಿತು.
ಸಿಬಿಐ ಕೋರ್ಟ್ ನೀಡಿರುವ ತೀರ್ಪು ಪ್ರಶ್ನಿಸಿ ಅದಕ್ಕೆ ಅಂಧ್ರಪ್ರದೇಶ ಹೈಕೋರ್ಟ್ ನಲ್ಲಿ ತಡೆಯಾಜ್ಞೆ ತರಬಹುದಾದ ಒಂದು ಅವಕಾಶ ಭಾರತದ ಕಾನೂನು ವ್ಯವಸ್ಥೆಯಲ್ಲಿ ಜನಾರ್ಧನರೆಡ್ಡಿ ಅವರಿಗಿದೆ. ರೆಡ್ಡಿ ಅವರು ನೇಮಿಸಿಕೊಂಡಿರುವ ಕಾನೂನು ತಜ್ಞರ ಟೀಂ ತಡೆಯಾಜ್ಞೆ ತರುವ ಸಂಬಂಧವಾಗಿ ತೀರ್ಪು ಬಂದ ಮರು ಘಳಿಗೆಯಿಂದಲೇ ಸಕ್ರೀಯವಾಗಿದೆ. ಅವರ ಕುಟುಂಬವರ್ಗ, ಸ್ನೇಹಿತರು ಕೂಡ ಸ್ಟೇ ಸಿಗಲಿ ಎಂದು ಎಲ್ಲಾ ದೇವರುಗಳಿಗೂ ಕೈಮುಗಿಯುತ್ತಿದ್ದಾರೆ.
* ಆಕಾಂಷಿಗಳ ದೊಡ್ಡ ದಂಡೇ ಜನನ:
ಅತ್ತ ರೆಡ್ಡಿ ಶಿಕ್ಷೆಗೆ ತಡೆಯಾಜ್ಞೆ ತರಲು ನಡೆದಿರುವ ಪರಿಸ್ಥಿತಿಯಲ್ಲಿ ಶುಭ ಕಾಣ್ತಾಯಿಲ್ಲ. ಹೀಗಾಗಿ ಅವರು ಪ್ರತಿನಿಧಿಸುತ್ತೀರುವ ಕೊಪ್ಪಳ ಜಿಲ್ಲೆಯ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೆ ಉಪ ಚುನಾವಣೆಯ ರಾಜಕೀಯ ಚಟುವಟಿಕೆಗಳು ದೊಡ್ಡದಾಗಿಯೇ ಗರಿಬಿಚಿಕೊಂಡಿವೆ. ಬಹು ಮುಖ್ಯವಾಗಿ ಚುನಾವಣೆ ಜರುಗಿದರೇ ಸರ್ಕಾರದ ಬಲದೊಂದಿಗೆ ನಮ್ಮದೇ ಗೆಲುವು ಖಚಿತ ಎನ್ನುವ ಕನಸನ್ನು ಆಡಳಿರೂಢ ಕಾಂಗ್ರೆಸಿಗರು ಕಾಣ್ತಾಯಿದ್ದಾರೆ.
ಕೈ ಚಿಹ್ನೆಯ ಬಿಫಾರ್ಂ ಒಡೆಯರಾದರೇ ಶಾಸನಸಭೆಗೆ ಅಡ್ಮಿಷನ್ ಫಿಕ್ಸ್! ಎನ್ನುವ ನಿರೀಕ್ಷೆ ಜಾಸ್ತಿ ಇದೆ! ಹೀಗಾಗಿ ಬೈ ಎಲೇಕ್ಷನ್ ಅನೌನ್ಸ್ ಇನ್ನೂ ಪಕ್ಕಾ ಆಗದಿದ್ರುನೂ ಕಾಂಗ್ರೆಸ್ ಕ್ಯಾಂಡಿಡೇಟ್ ಆಗಲು ಮುದಿ ಪೈಲ್ವಾನ್ ರು ಸೇರಿದಂತೆ ಹೊಸಬರು ಕೂಡ ತೆರೆಮರೆಯಲ್ಲಿ ಆಕಾಂಷಿಗಳಾಗಿ ಪಕ್ಷದ ನಾಯಕರ ಮನೆಗಳನ್ನು ಎಡತಾಕುವತ್ತ ದೊಡ್ಡ ಚಿತ್ತ ಹರಿಸಿರುವುದು ಜೋರಾಗಿಯೇ ಸೌಂಡ್ ಮಾಡ್ತಾಯಿದೆ.
* ಗರಿಬಿಚ್ಚಿಕೊಂಡ ಗೆಲುವಿನ ನಿರೀಕ್ಷೆಗಳು
ಜನಾರ್ಧನರೆಡ್ಡಿ ಅವರಿಗೆ ಶಿಕ್ಷೆ ನಿಗದಿ ಪಡಿಸಿ ಸ್ಪೇಷಲ್ ಕೋರ್ಟ್ ನೀಡಿದ ತೀರ್ಪು ಹೊರಬಂದ ಬೆನ್ನಲ್ಲೇ ಶಾಸಕ ಸ್ಥಾನ ದಿಂದಲೂ ಅನರ್ಹತೆ ಆದೇಶವೂ ಪ್ರಕಟವಾಗುತ್ತಿದ್ದಂತೆಯೇ ಕಾಂಗ್ರೆಸ್ ಪಾಳೆಯದಲ್ಲಿ ಗಂಗಾವತಿ ಕ್ಷೇತ್ರ ಕೈವಶವಾಯ್ತು ಎನ್ನುವ ವಾತಾವರಣ ಕೈ ಪಾಳೆಯದಲ್ಲಿ ನಿರ್ಮಾಣವಾಯ್ತು. ರಾಜ್ಯದಲ್ಲಿ ಪಕ್ಷದ ಸರ್ಕಾರ ಇರುವುದರಿಂದ ಗೆಲುವಿನ ನಿರೀಕ್ಷೆ ಮಾಡುವುದು ಸಹಜ ಕೂಡ.
ಆದರೇ, ಒಂದು ವೇಳೆ ಹೈಕೋರ್ಟ್ ನಲ್ಲಿ ರೆಡ್ಡಿ ಅವರಿಗೆ ಹಿನ್ನಡೆ ಉಂಟಾದರೇ!?
ಆಗ ಗಂಗಾವತಿ ಕ್ಷೇತ್ರಕ್ಕೂ ಉಪ ಚುನಾವಣೆ ಘೋಷಣೆ ಆಗುವ ಸಮಯ ಒದಗಿ ಬಂದ್ರೇ ಕಳೆದ ವರ್ಷ ಜರುಗಿದ ಶಿಗ್ಗಾಂವ್, ಚನ್ನಪಟ್ಟಣ, ಸಂಡೂರು ಕ್ಷೇತ್ರಗಳಲ್ಲಿನ ಬೈ ಎಲೇಕ್ಷನ್ ನಲ್ಲಿ ದಿಗ್ವಿಜಯ ಸಾಧಿಸಿರುವ ಸಿದ್ದರಾಮಯ್ಯ ನೇತೃತ್ವದ ಆಡಳಿತರೂಢ ಸರ್ಕಾರಕ್ಕೆ ಭತ್ತನಾಡು ಗಂಗಾವತಿಯಲ್ಲೂ ಗೆಲುವಿನ ಆಶ್ವಮೇಧ ಯಾಗದ ಕುದುರೆ ಸುಲಭವಾಗಿಯೇ ಜಯದ ಮಾಲೆ ಧರಿಸುತ್ತೇ ಎನ್ನುವ ಸಾಧ್ಯತೆಗಳು ಕಷ್ಟ ಸಾಧ್ಯ!
ಯಸ್, ಸರ್ಕಾರದ ಬಲ ಇದೇ ಎಂದಾಕ್ಷಣ ಗಂಗಾವತಿಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುತ್ತೇ ಎನ್ನಲಾಗದು. ಏಕೆಂದರೆ ಶಿಗ್ಗಾಂವ್, ಚನ್ನಪಟ್ಟಣ, ಸಂಡೂರು ಕ್ಷೇತ್ರಗಳಲ್ಲಿ ಇದ್ದಂತಹ ಪೂರಕ ವಾತಾವರಣ ಗಂಗಾವತಿ ಕ್ಷೇತ್ರದಲ್ಲಿ ಆಡಳಿತರೂಢರ ಪರವಾಗಿ ಕಾಣ್ತಾಯಿಲ್ಲ.
*ಕಾಂಗ್ರೆಸ್ ಗೆದ್ದೇ ಎರಡೂವರೇ ದಶಕವಾಗಿದೆ!
ಭತ್ತಕಣಜವೆಂದೇ ಲೋಕವಿಖ್ಯಾತಿಹೊಂದಿರುವ ಗಂಗಾವತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿ ಎರಡೂವರೇ ದಶಕವಾಗಿದೆ! 1999ರಲ್ಲಿ ಶ್ರೀರಂಗದೇವರಾಯಲು ಕೈಪಕ್ಷಕ್ಕೆ ಜಯದೊರಕಿಸಿ ಕೊಟ್ಟಿದ್ದೆ ಅಂತಿಮ. ಅಲ್ಲಿಂದ ಜರುಗಿ 2004ರಲ್ಲಿ ಜೆಡಿಎಸ್, 2008 ಬಿಜೆಪಿ, 2013 ಜೆಡಿಎಸ್, 2018 ಬಿಜೆಪಿ ಹಾಗು 2023 ಕೆಕೆಆರ್ ಪಿಪಿ ಪಕ್ಷಗಳು ಗೆಲುವು ಸಾಧಿಸಿವೆ.
* ಬಿಜೆಪಿಯಲ್ಲಿ ರೆಡ್ಡಿ ಪರ:
ಇತ್ತ ಬಿಜೆಪಿಯಲ್ಲಿ ಅಂತಹ ಚಟುವಟಿಕೆಗಳು ಕಾಣಿಸಿಲ್ಲ. ಅದ್ಯಗೂ ರೆಡ್ಡಿ ಅವರ ಪರಮಾಪ್ತ ಬೆಂಬಲಿಗರು ಇತ್ತಿಚಿಗೆ ಗಂಗಾವತಿ ಶಹರದಲ್ಲಿ ಸಭೆಯೊಂದನ್ನು ಆಯೋಜಿಸಿ ಜನಾರ್ಧನರೆಡ್ಡಿ ಪತ್ನಿ ಅರುಣಾ ಅವರಿಂದ ವರ್ಚುವಲ್ ಮೂಲಕ ಬೆಂಬಲಿಗರು, ಕಾರ್ಯಕರ್ತರಿಗೆ ಧೈರ್ಯ ಹೇಳಿಸುವ ಕಾಯಕವನ್ನು ಅಚ್ಚುಕಟ್ಟಾಗಿ ಮಾಡಿ ಜನಾರ್ಧನರೆಡ್ಡಿ ಅವರ ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸುವ ಕೆಲಸ ಮಾಡಿದ್ದಾರೆ.
ಜನಾರ್ಧನರೆಡ್ಡಿ ಬೆಂಬಲಿಗರು, ಅಭಿಮಾನಿಗಳ ಹೆಸರಿನಲ್ಲಿ ಆಯೋಜಿಸಿದ್ದ ಈ ಸಭೆಗೆ ಬಿಜೆಪಿ ಪಕ್ಷದ ಕೊಪ್ಪಳ ಜಿಲ್ಲಾಧ್ಯಕ್ಷರು, ಕನಕಗಿರಿ ಕ್ಷೇತ್ರದ ಮಾಜಿ ಶಾಸಕ ಬಸವರಾಜ ಧಡೇಸೂಗೂರು, ಮಾಜಿ ಎಮ್ಮೇಲ್ಸಿ ಕರಿಯಣ್ಣ ಸಂಗಟಿ ಭಾಗವಹಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದ್ದಾರೆ. ಇದನ್ನು ನೋಡಿದರೆ ಜೈಲಿನಲ್ಲಿದ್ರೂ ಕೊಪ್ಪಳ ಜಿಲ್ಲಾ ಬಿಜೆಪಿಯಲ್ಲಿ ಜನಾರ್ಧನರೆಡ್ಡಿ ಅವರ ಹವಾ ಜೋರಾಗಿದೆ ಎನ್ನಬಹುದು.
ಗಂಗಾವತಿ ಕ್ಷೇತ್ರ ಉಪ ಚುನಾವಣೆ ಸಮರ ಜರುಗುವುದೇ? ಇಲ್ಲವೆ? ಎನ್ನುವುದು ಅಂಧ್ರಪ್ರದೇಶ ಹೈಕೋರ್ಟ್ ನೀಡುವ ತೀರ್ಪು ನಿರ್ಧಾರ ಮಾಡಲಿದೆ. ಹೀಗಾಗಿ ತಡೆಯಾಜ್ಞೆ ತೀರ್ಪು ಬಳಿಕವೇ ಗಂಗಾವತಿ ಕ್ಷೇತ್ರದ ಉಪ ಚುನಾವಣೆಯ ಭವಿಷ್ಯ ನಿರ್ಧರಿತ. ಅಲ್ಲಿಯ ತನಕ ಬರೀ ಊಹಾಪೋಹಗಳದ್ದೆ ಜೋರುಬಾರು ನಡೆಯುತ್ತಲೇ ಇರುತ್ತೆ.
- ಹುಳ್ಳಿಪ್ರಕಾಶ, ಸಂಪಾದಕರು.