* ಸುನಾಮಿನ್ಯೂಸ್, ಜೂನ್,1
ಕಬ್ಬು ಬೆಳೆಗಾರರ ಹಿತಾರಕ್ಷಣೆ ಮತ್ತು ಅಭಿವೃದ್ಧಿ ಸಂಬಂಧಿತವಾಗಿ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ನೂತನವಾಗಿ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡುವುದು ಅಗತ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ತಾಲೂಕಿನ ಕೆಚ್ಚಿನಬಂಡಿ ಗ್ರಾಮದ ಬಳಿ ಕರ್ನಾಟಕ ಬಂಗಾರು ಶುಗರ್ ಲಿಮಿಟೆಡ್ ನವರು ಸ್ಥಾಪನೆ ಮಾಡುವ ಸಕ್ಕರೆ ಕಾರ್ಖಾನೆಗೆ ತಕ್ಷಣವೇ ಅನುಮತಿ ನೀಡುವಂತೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಗೋಣಿಬಸಪ್ಪ ವರದಾಪುರ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಸೋಮವಾರ ಮಧ್ಯಾಹ್ನ ರೈತಸಂಘದ ಮುಖಂಡರ ನಿಯೋಗದ ಮೂಲಕ ಹಗರಿಬೊಮ್ಮನಹಳ್ಳಿ ತಹಶಿಲ್ದಾರ ಕವಿತಾರನ್ನು ಭೇಟಿ ಮಾಡಿ, ಸಕ್ಕರೆ ಕಾರ್ಖಾನೆ ಆರಂಭಿಸಲು ಅನುಮತಿ ನೀಡುವಂತೆ ಒತ್ತಾಯಿಸುವ ಮನವಿಪತ್ರವನ್ನು ಅರ್ಪಿಸಿದ ಬಳಿಕ ಅವರು ಮಾತನಾಡಿದರು.
ಕರ್ನಾಟಕ ಬಂಗಾರು ಶುಗರ್ ಪ್ರೈವೇಟ್ ಲಿಮಿಟೆಡ್ ನವರು ತಾಲೂಕಿನ ಕೆಚ್ಚಿನಬಂಡಿ ಬಳಿ ಸರ್ವೆನಂ 195/ಎ2 ಜಮೀನಿನಲ್ಲಿ ಹೊಸದಾಗಿ ಶುಗರ್ ಫ್ಯಾಕ್ಟರಿ ಓಪನ್ ಮಾಡಲು ಫೆಬ್ರವರಿ22, 2024 ಹಾಗೂ ಮೇ,20,2025 ರಂದು ಎರಡು ಸಲ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ ಎಂದರು.
ಹೊಸದಾಗಿ ಕಾರ್ಖಾನೆ ಆರಂಭವಾದರೇ ತಾಲೂಕಿನಲ್ಲಿ ಕಬ್ಬುಬೆಳೆಯುವ ಬೆಳೆಗಾರರಿಗೆ ಅರ್ಥಿಕ ಭದ್ರತೆಯ ಜೊತೆಗೆ ಮಾನಸಿಕ ನೆಮ್ಮದಿಯೂ ಸಿಗಲಿದೆ ಜೊತೆಗೆ ಉದ್ಯೋಗಾವಕಾಶಗಳು ಹೆಚ್ಚಲಿದೆ ಈ ಕಾರಣಕ್ಕೇನೆ ತಾಲೂಕಿನಲ್ಲಿ ಸಕ್ಕರೆ ಆರಂಭಿಸುವುದು ಅಗತ್ಯವಿದ್ದು ರಾಜ್ಯ ಸರ್ಕಾರ ಅನುಮತಿ ನೀಡಲೇಬೇಕೆಂದು ನಾವು ಮನವಿಪತ್ರದ ಮೂಲಕ ಒತ್ತಾಯಿಸಿದ್ದೇವೆ ಎಂದು ಗೋಣಿಬಸಪ್ಪ ಮಾಧ್ಯಮದವರಿಗೆ ತಿಳಿಸಿದರು.
ಸಂಘದ ತಾಲೂಕಾಧ್ಯಕ್ಷ ಹರಟೆ ಕಾಳಪ್ಪ, ಕಾರ್ಯಾಧ್ಯಕ್ಷ ಹೆಚ್ ನಾಗರಾಜ, ರೈತಮುಖಂಡರಾದ ಎನ್ ವೀರಣ್ಣ, ಗಡ್ಡಿ ನಿಂಗಪ್ಪ, ಎಚ್ ಶೇಖರಪ್ಪ,,ಕೆ. ಶಿವಣ್ಣ,, ಹೊರಕೇರಪ್ಪನವರ ಹನುಮಂತಪ್ಪ ಸೇರಿದಂತೆ ಹಲವು ರೈತರು ಭಾಗವಹಿಸಿದ್ದರು.
- ಹುಳ್ಳಿಪ್ರಕಾಶ, ಸಂಪಾದಕರು, ಸುನಾಮಿನ್ಯೂಸ್, ಬೆಂಗಳೂರು.