ದೇಶಾದ್ಯಂತ 9 ಹೊಸ ಅಮೃತ್ ಭಾರತ್ ಎಕ್ಸ್ಪ್ರೆಸ್ ರೈಲುಗಳ ಘೋಷಣೆಯಾಗಿದ್ದು, ಬೆಂಗಳೂರು-ಅಲಿಪುರ್ ದ್ವಾರ ನಡುವೆ ಕರ್ನಾಟಕಕ್ಕೆ ಒಂದು ರೈಲು ಸಿಕ್ಕಿದೆ. ಆದರೆ, ಈ ರೈಲು ಕನ್ನಡಿಗರಿಗೆ ಪ್ರಯೋಜನಕ್ಕಿಂತ ವಲಸಿಗರಿಗೆ ಅನುಕೂಲ ಮಾಡಿಕೊಡುತ್ತದೆ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ. ರಾಜ್ಯದೊಳಗೆ ಹಲವು ಮಾರ್ಗಗಳಲ್ಲಿ ರೈಲುಗಳ ಬೇಡಿಕೆಯಿದೆ.
ಬೆಂಗಳೂರು: ದೇಶಾದ್ಯಂತ 9 ಹೊಸ ಅಮೃತ್ ಭಾರತ್ ಎಕ್ಸ್ಪ್ರೆಸ್ ರೈಲು ಆರಂಭಿಸುವುದಾಗಿ ರೈಲ್ವೆ ಇಲಾಖೆ ಘೋಷಿಸಿದೆ. ಇರದಲ್ಲಿ ಕರ್ನಾಟಕದ ಪಾಲಿಗೂ ಒಂದು ರೈಲು ನೀಡಲಾಗಿದೆ. ಆದರೆ, ಈ ಹೊಸ ರೈಲು ನಮಗೆ ಬೇಡ ಎಂದು ಹಲವರು ಕನ್ನಡಿಗರು ವಿರೋಧ ವ್ಯಕ್ತಪಡಿಸಿದ್ದಾರೆ.
ರೈಲ್ವೆ ಇಲಾಖೆ ನೀಡಿರುವ ಹೊಸ ರೈಲು ಬೆಂಗಳೂರು – ಪಶ್ಚಿಮ ಬಂಗಾಳದ ಅಲಿಪುರ್ ದ್ವಾರ ನಗರದ ನಡುವೆ ವಾರಕ್ಕೆ ಒಮ್ಮೆ ಸಂಚಾರ ನಡೆಸುತ್ತದೆ. ಕರ್ನಾಟಕಕ್ಕೆ ಬೆಂಗಳೂರು ಬಿಟ್ಟರೇ ಎಲ್ಲಿಯೂ ನಿಲುಗಡೆ ಇಲ್ಲ. ಆಂಧ್ರ ಪ್ರದೇಶ ಮಾರ್ಗವಾಗಿ, ಒಡಿಶಾ ಮೂಲಕ ಪಶ್ಚಿಮ ಬಂಗಾಳಕ್ಕೆ ಸಾಗಲಿದೆ. ಈ ರೈಲಿನಿಂದ ಕರ್ನಾಟಕಕ್ಕೆ, ಕನ್ನಡಿಗರಿಗೆ ಪ್ರಯೋಜನ ಬಹಳ ಕಡಿಮೆ. ಬದಲಾಗಿ ಬೆಂಗಳೂರಿಗೆ ವಲಸೆ ಬರುವ, ಈಗಾಗಲೇ ಬಂದಿರುವ ಬಿಹಾರ, ಪಶ್ಚಿಮ ಬಂಗಾಳ, ಒಡಿಶಾ ಭಾಗದ ಜನರಿಗೆ ಅನುಕೂಲವಾಗುತ್ತದೆ.
ನಮಗೆ ಈ ರೈಲು ಬೇಡ ಎಂದ ಕನ್ನಡಿಗರ
ಪ್ರಮುಖವಾಗಿ ಸಾಮಾಜಿಕ ಜಾಲತಾಣಗಳಲ್ಲಿ ರಾಜ್ಯಕ್ಕೆ ಸಿಕ್ಕ ಹೊಸ ರೈಲಿಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. “ಕರ್ನಾಟಕದೊಳಗೆ ಶಿವಮೊಗ್ಗದಿಂದ ರಾಯಚೂರು ಮೂಲಕ ಹೊಸಪೇಟೆ, ಮಂಗಳೂರಿನಿಂದ ಕಲಬುರಗಿ, ಬೆಂಗಳೂರಿನಿಂದ ರಾಯಚೂರು ಮೂಲಕ ಹೊಸಪೇಟೆ ಮುಂತಾದ ರೈಲುಗಳನ್ನು ಜನರು ಕೇಳುತ್ತಿದ್ದಾರೆ. ಪಶ್ಚಿಮ ಬಂಗಾಳದಿಂದ ಬೆಂಗಳೂರಿಗೆ ನಾವು ಏನನ್ನು ತರುತ್ತಿದ್ದೇವೆ ಎಂಬುದನ್ನು ನೋಡಿ. ವಲಸಿಗರನ್ನು ಕರೆತಂದು ಬೆಂಗಳೂರಿಗೆ ಹಾಕುವ ಈ ರೈಲು ನಮಗೆ ಬೇಡ ಎಂದು ಮೋಹನ್ ದಾಸರಿ ಎಂಬ ನೆಟ್ಟಿಗರು ಕಿಡಿಕಾರಿದ್ದಾರೆ.
ನಮ್ಮ ಜನ ನೇತಾಡಿಕೊಂಡು ಪ್ರಯಾಣ ಇರೋ ಬರೋ ರೈಲು ಉತ್ತರಕ್ಕೆ!
” ನಮ್ಮ ಕಲ್ಯಾಣ ಕರ್ನಾಟಕ ಜನ ನೇತಾಡ್ಕೊಂಡು ಪ್ರಯಾಣ ಮಾಡ್ತಿದ್ರೆ ಇಲ್ಲಿ ಇರೋ ಬರೋ ಟ್ರೈನಗಳನ್ನ ಬೇರೆ ರಾಜ್ಯಗಳಿಗೆ ಓಡುಸ್ತಿದಾರೆ ” ಎಂದು ಮತ್ತೊಬ್ಬ ನೆಟ್ಟಿಗ ಬಾಲನಾತೇಶ್ ಬೇಸರ ವ್ಯಕ್ತಪಡಿಸಿದ್ದಾರೆ. ” ಉತ್ತರ ಭಾರತಕ್ಕೆ ನಿಜವಾದ ರೈಲು, ಉತ್ತರ ಕರ್ನಾಟಕಕ್ಕೆ ಕಂಬಿ ಇಲ್ಲದ ರೈಲು ” ಎಂದು ಮತ್ತೊಬ್ಬರು ಕಿಡಿಕಾರಿದ್ದಾರೆ.
ಕರ್ನಾಟಕ ಕಸದ ಗುಂಡಿಯಲ್ಲ
” ಬಂಗಾಲ, ಬಾಂಗ್ಲಾದೇಶದಿಂದ ಕರ್ನಾಟಕಕ್ಕೆ ಬಂದು ವಕ್ಕರಿಸಲು ವಲಸಿಗರಿಗಾಗಿ ರೈಲು! ಹಿಂದಿ ಹೈಕಮಾಂಡ್ ಪಕ್ಷಗಳಿಗೆ ಕರ್ನಾಟಕ ಕಸದ ಗುಂಡಿ, ಎಲ್ಲರನ್ನು ತಂದು ತುಂಬೋಕೆ. ಈ ರೈಲು ನಮಗೆ ಬೇಡ ” ಎಂದು ಸಿದ್ಧೇಗೌಡ ಶ್ಯಾಮ್ ಪ್ರಸಾದ್ ಎಂಬುವವರು ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.
ಒಂದು ಮಾತ್ರವಲ್ಲ ಒಟ್ಟು 3 ರೈಲು ಓಡಿಸಲು ನಿರ್ಧಾರ
ಸದ್ಯ ಪಶ್ಚಿಮ ಬಂಗಾಳ – ಕರ್ನಾಟಕ ನಡುವೆ 1 ಮಾತ್ರ ರೈಲು ಘೋಷಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ 2 ರೈಲು ಇದೇ ರಾಜ್ಯಗಳ ನಡುವೆ ಸಂಚಾರ ನಡೆಸಲಿವೆ. ಈ ಮೂಲಕ ರಾಜ್ಯಕ್ಕೆ 3 ವಂದೇ ಭಾರತ್ ರೈಲು ಸಿಕ್ಕರೂ ಕನ್ನಡಿಗರಿಗೆ ಪ್ರಯೋಜನ ಅಷ್ಟಕ್ಕಷ್ಟೇ!
ಕರ್ನಾಟಕದಲ್ಲಿ ಅಮೃತ್ ಭಾರತ್ ಎಕ್ಸ್ಪ್ರೆಸ್ ಬೇಡಿಕೆ ಮಾರ್ಗಗಳು ಎಲ್ಲೆಲ್ಲಿ?
- ಬೆಂಗಳೂರು – ತಿರುಪತಿ
- ಬೆಂಗಳೂರು ಹೊಸಪೇಟೆ ವಿಜಯಪುರ
- ಹುಬ್ಬಳ್ಳಿ – ದೆಹಲಿ
- ಹುಬ್ಬಳ್ಳಿ – ವಾರಣಾಸಿ
- ಮಂಗಳೂರು – ಅಯೋಧ್ಯೆ
- ಮೈಸೂರು – ಅಯೋಧ್ಯೆ
- ಶಿವಮೊಗ್ಗ – ತಿರುವನಂತಪುರ
- ಬೆಂಗಳೂರು – ಹುಬ್ಬಳ್ಳಿ – ಪುಣೆ – ಮುಂಬೈ
- ಬೆಂಗಳೂರು – ಕಲಬುರಗಿ
- ಕಾರವಾರ – ಮಂಗಳೂರು – ಬೆಂಗಳೂರು


