Monday, December 22, 2025
HomeUncategorizedದಲಿತ ಪೂಜಾರಿಯ ಪಾದ ಸ್ಪರ್ಷಕ್ಕಾಗಿಯೇ ನೆಲದ ಮೇಲೆ ಸಾಲಾಗಿ ಮಲಗುವ ಭಕ್ತರು! -----

ದಲಿತ ಪೂಜಾರಿಯ ಪಾದ ಸ್ಪರ್ಷಕ್ಕಾಗಿಯೇ ನೆಲದ ಮೇಲೆ ಸಾಲಾಗಿ ಮಲಗುವ ಭಕ್ತರು! —–

,* ಹುಳ್ಳಿಪ್ರಕಾಶ, ಸಂಪಾದಕರು

  • ಹರಪನಹಳ್ಳಿ/ವಿಜಯನಗರ, ಡಿ.22
    ವಿಜಯನಗರ ಜಿಲ್ಲೆಯ ಕೊನೆ ಭಾಗದ ಹರಪನಹಳ್ಳಿ ತಾಲೂಕಿನ ಅರಸಿಕೆರೆ ಗ್ರಾಮದಲ್ಲಿ ಶ್ರೀ ದಂಡಿ ದುರುಗಮ್ಮದೇವಿಯ ಜಾತ್ರಾಮಹೋತ್ಸವ ಸಹಸ್ರಾರು ಭಕ್ತರ ಪಾಲ್ಗೋಳುವಿಕೆಯ ಮೂಲಕ ಭಾನುವಾರ ಸಂಪನ್ನಗೊಂಡಿತು.
    ದಲಿತರಿಗೆ ದೇವಸ್ಥಾನದ ಒಳಗಡೆ ಬಿಟ್ಟುಕೊಳ್ಳಲು ಈಗಲೂ ಹಲವು ಕಡೆಗಳಲ್ಲಿ ತಗಾದೆ ಮಾಡುವಂತಹ ಪ್ರಕರಣಗಳು ಸದ್ದು ಮಾಡುತ್ತಲೇ ಇರುತ್ತವೆ. ಆದರೇ ಅರಸಿಕೆರೆ ಶ್ರೀ ದಂಡಿ ದುರುಗಮ್ಮ ಜಾತ್ರೆಯಲ್ಲಿ ದಲಿತವರ್ಗದ ಪೂಜಾರಿಗಳು ಧಾರ್ಮಿಕ ವಿಧಿ,ವಿಧಾನಗಳನ್ನು ನಡೆಸುವುದು ವಿಶೇಷವಾಗಿದೆ ಹಾಗು ಬಲು ಇಂಟರೆಸ್ಟಿಂಗ್ ಆಗಿದೆ ಕೂಡ.

ಪ್ರತಿ ವರ್ಷ ಕಾರ್ತೀಕ ಮಾಸದ ಕೊನೆಯ ಅಮಾವಾಸ್ಯೆನಂತರ ಬರುವ ಶುಕ್ರವಾರ ದಿಂದ ಮೂರು ದಿನಗಳ ಕಾಲ ಜರುಗುವ ಜಾತ್ರೆಯಲ್ಲಿ ಕೊನೆಯ ದಿನವಾದ ಭಾನುವಾರ ಬೆಳಗಿನ ಜಾವ ಗಂಗೆಪೂಜೆಯ ನಂತರ ಕೇಲು ಹೊತ್ತು ಬರುವ ದಲಿತ ಪೂಜಾರಿಯ ಪಾದಸ್ಪರ್ಶಕ್ಕಾಗಿ ಸುಮಾರು ಎರಡು ಕೀಲೋಮೀಟರ್ ದೂರಕ್ಕೂ ಉದ್ದಕ್ಕೆ ಎಲ್ಲಾ ಜಾತಿ,ಧರ್ಮದ ಜನರು ನೆಲದ ಮೇಲೆ ಮಲಗುವುದು ಅರಸಿಕೆರೆ ಶ್ರೀ ದಂಡಿ ದುರುಗಮ್ಮ ಜಾತ್ರೆಯ ವಿಶಿಷ್ಟವಾದ ಧಾರ್ಮಿಕ ಆಚರಣೆ ಆಗಿದೆ.

ಹಲವು ಶತಮಾನಗಳಿಂದಲೂ ಈ ಪ್ರಕ್ರೀಯೆ ಚಾಚುತಪ್ಪದೆ ನಡೆದುಕೊಂಡು ಬರುತ್ತಿದೆ. ಈ ಸಲ ದಲಿತವರ್ಗದ ಸಂತೋಷ್ ಪೂಜಾರಿ ಕೇಲು ಹೊತ್ತುಕೊಂಡಿದ್ದರು. ಹೊಳೆಪೂಜೆ ನಂತರ ವಿವಿಧ ವಾದ್ಯಗಳು, ನೆರೆದಿದ್ದ ಅಸಂಖ್ಯಾತ ಭಕ್ತರ ಉಧೋ,ಉಧೋ ಜಯಘೋಷಗಳ ಮಧ್ಯೆ ಪೂಜಾರಿ ಸಂತೋಷ ಕೇಲು ಹೊತ್ತು ಸಾಗುತ್ತಿದ್ದಂತೆಯೇ ವಿಜಯನಗರ, ಬಳ್ಳಾರಿ, ದಾವಣಗೆರೆ ಸಹಿತ ನಾಡಿನ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತರು ನೆಲದ ಮೇಲೆ ಉದ್ದಕ್ಕೆ ಮಲಗಿದರು. ಮಲಗಿದ ಭಕ್ತರ ಮೇಲೆ ಪೂಜಾರಿ ಸಂತೋಷ ನಡೆದು ಬಂದು ಶ್ರೀದಂಡಿ ದುರುಗಮ್ಮ ಕೇಲು ಗುಡಿ ತುಂಬಿಸಿದರು.

ಮಕ್ಕಳಿಗೆ ಮದುವೆ, ಶಿಕ್ಷಣ, ಆರೋಗ್ಯ, ಉದ್ಯೋಗ, ಸಂತಾನ, ಉತ್ತಮ ಬೆಳೆ, ವ್ಯವಹಾರ ದಲ್ಲಿ ಲಾಭ ಹೀಗೇ ನಾನಾ ಹರಕೆಗಳನ್ನು ಕಟ್ಟಿಕೊಂಡ ಭಕ್ತರು, ಹರಕೆ ನೇರವೆರಿದ ಭಕ್ತರು ಜಾತ್ರೆಯ ಸಮಯದಲ್ಲಿ ದೇವಿಯ ಕೇಲು ಹೊತ್ತು ಬರುವ ಪೂಜಾರಿ ಪಾದಸ್ಪರ್ಷ ಪಡೆಯಲು ನೆಲದಲ್ಲಿ ಮಲಗುವುದು ಬಹು ವರ್ಷಗಳಿಂದಲೂ ನಡೆದುಕೊಂಡು ಬರುತ್ತೀದೆ ಎನ್ನುತ್ತಾರೆ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಅರಸಿಕೆರೆ ಅಣ್ಣಪ್ಪ ಸಾಹುಕಾರ.

ಇನ್ನೂ ಜಾತ್ರೆಯ ನಿಮಿತ್ತ ಐದು ದೇವಿಯರ ಊಟದ ಕಾರ್ಯಕ್ರಮ ಬಲು ವಿಶೇಷ ಕೂಡ. ಏಕೆಂದರೆ, ಮೂರು ದಿನಗಳ ಜಾತ್ರೆಗೆ ಬರುವ ಭಕ್ತರು ಹಾಲು, ಮೊಸರು, ಗಿಣ್ಣದ ಹಾಲು, ಮೊಸರು ಅನ್ನದ ಉಂಡಿಗಳು, ಸಿಹಿ ಖಾದ್ಯಗಳನ್ನು ಶ್ರೀದೇವಿಗೆ ಅರ್ಪಿಸುತ್ತಾರೆ. ಭಕ್ತರು ಅರ್ಪಿಸಿದ ಎಲ್ಲವನ್ನೂ ಕಲಸಿ ತಯಾರಿಸುವ ವಿಶೇಷ ಪ್ರಸಾದವನ್ನು ಕೇಲು ಗುಡಿ ತುಂಬಿದ ಬಳಿಕ ಸಂಜೆ ದೇವಿಯರ ಊಟ ಎಂದು ಭಕ್ತರಿಗೆ ವಿತರಿಸಲಾಗುತ್ತದೆ.

ಜಾತ್ರೆ ಮುಗಿಯುವ ತನಕವೂ ಐದು ದೇವಿಯರು ಉಪವಾಸ ಇರುತ್ತಾರೆ. ಅಂತಿಮ ದಿನ ಈ ದೇವಿಯರಿಗೆ ಊಟ ನೈವೇದ್ಯ ಮಾಡಲಾಗುತ್ತದೆ ಎನ್ನುವ ಪ್ರತಿತವಿದೆ.

ಡಿಸೆಂಬರ್ 19 ರಿಂದ 21ರ ತನಕ ಮೂರುದಿನಗಳ ಕಾಲ ಜರುಗಿದ ಜಾತ್ರಾಮಹೋತ್ಸವದಲ್ಲಿ ಸಕುಟುಂಬ ಸಮೇತರಾಗಿ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ಶ್ರೀದಂಡಿ ದುರುಗಮ್ಮನ ದರ್ಶನ ಭಾಗ್ಯಪಡೆದರು. ಅರಸಿಕೆರೆಯಲ್ಲಿ ಹಬ್ಬದ ವೈಭವ ಮನೆ ಮಾಡಿತ್ತು. ದೇವಸ್ಥಾನಗಳು, ರಸ್ತೆಗಳು ವಿದ್ಯುತ್ ದೀಪಗಳಿಂದ ಜಗ,ಜಮಿಸಿದವು.

ಭಕ್ತರು ಸಾಲಾಗಿ ನೆಲದ ಮೇಲೆ ಮಲಗಿ ದಲಿತ ಪೂಜಾರಿಯ ಪಾದ ಸ್ಪರ್ಷ ಪಡೆದುಕೊಳ್ಳುವ ಕಾರಣ ದಿಂದಾಗಿಯೇ ಅರಸಿಕೆರೆ ಶ್ರೀ ದಂಡಿನ ದುರುಗಮ್ಮ ಜಾತ್ರೆ ಈ ನಾಡಿನ ವಿಶಿಷ್ಟ ಜಾತ್ರೆ ಆಗಿ ಗಮನಸೆಳೆಯುತ್ತಿದೆ.

  • ಹುಳ್ಳಿಪ್ರಕಾಶ, ಸಂಪಾದಕರು.
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments