- ಸುನಾಮಿನ್ಯೂಸ್, ಮಾರ್ಚ್,4
- ಹಗರಿಬೊಮ್ಮನಹಳ್ಳಿ/ವಿಜಯನಗರ
* ಹುಳ್ಳಿಪ್ರಕಾಶ, ಸಂಪಾದಕರು
ಭೂ ಮಂಡಲವನ್ನು ಚಂದ್ರಗ್ರಹಣ ಆವರಿಸಿಕೊಂಡಿರುವ ಸಂದರ್ಭದಲ್ಲಿ, ಗ್ರಹಣ ದಿಂದಾಗಿ ಎಲ್ಲಾ ದೇವಸ್ಥಾನಗಳ ಬಾಗಿಲು ಮುಚ್ಚಿರುವ ವೇಳೆಯಲ್ಲಿಯೇ ಇತ್ತ ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಉತ್ತರ ತಂಬ್ರಹಳ್ಳಿಯ ಬಳಿ ತುಂಗಾಭದ್ರ ಜಲಾಶಯದ ಹಿನ್ನೀರ ದಂಡೆಯ ಮೇಲೆ ನೆಲಸಿರುವ ಐತಿಹಾಸಿಕ ಪ್ರಸಿದ್ದನಾದ ಶ್ರೀ ಬಂಡೆ ರಂಗನಾಥ ಸ್ವಾಮಿಯು ಬೆಟ್ಟ ದಿಂದ ಕೆಳಗಿಳಿದು, ಭವ್ಯವಾದ ರಥ ಏರಿ, ಭಕ್ತರಿಗೆ ದರ್ಶನಕೊಟ್ಟ ವಿಶೇಷತೆ ಮಂಗಳವಾರ ಸಂಜೆ ಜರುಗಿತು.
ಈ ತಾಲೂಕು ಸೇರಿದಂತೆ ವಿಜಯನಗರ,ಬಳ್ಳಾರಿ, ಗದಗ, ಕೊಪ್ಪಳ, ಧಾರವಾಡ, ಹಾವೇರಿ, ದಾವಣಗೆರೆ, ಬೆಂಗಳೂರು ಸೇರಿದಂತೆ ನಾಡಿನ ವಿವಿಧ ಭಾಗಗಳಿಂದ ಗ್ರಹಣವನ್ನು ಲೆಕ್ಕಿಸದೆ ಸಕುಟುಂಬ ಸಮೇತರಾಗಿ ಬಂದಿದ್ದ ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗಿ ಆಗಿ, ತೇರಿಗೆ ಹೂ,ದವನ, ಉತ್ತೂತ್ತಿ, ಬಾಳೆಹಣ್ಣು ಎಸೆದು, ತೇರೆಳೆದು, ಬಂಡೇರಂಗಪ್ಪನಿಗೆ ತಮ್ಮ ಭಕ್ತಿಯನ್ನು ಸಮರ್ಪಿಸಿದರು.
ಹರಪನಹಳ್ಳಿ ಪಾಳೆಗಾರರ ಕಾಲದಲ್ಲಿ ನಿರ್ಮಾಣಗೊಂಡಿರುವ ಬಂಡೇ ರಂಗನಾಥಸ್ವಾಮಿ ಕ್ಷೇತ್ರದ ಮಹಿಮೆ ಆಪಾರ. ರಂಗನಾಥಸ್ವಾಮಿ ಬಂಡೆಯಲ್ಲಿ ಒಡಮೂಡಿದ್ದರಿಂದ ಭಕ್ತರು ಬಂಡೆ ರಂಗನಾಥಸ್ವಾಮಿ ಆಗಿ, ಬಂಡೆ ರಂಗಪ್ಪನಾಗಿ ಹಲವಾರು ಶತಮಾನಗಳಿಂದಲೂ ಆರಾಧಿಸಿಕೊಂಡು ಬರುತ್ತಿದ್ದಾರೆ.
ಭಕ್ತರ ಇಷ್ಟಾರ್ಥಗಳನ್ನು ನೇರೆವೇರಿಸುತ್ತಾನೆ ಎನ್ನುವ ಬಲವಾದ ನಂಬಿಕೆ ಭಕ್ತರ ಮನದಾಳದಲ್ಲಿ ಗಟ್ಟಿಯಾಗಿ ತಳ ಊರಿರುವ ಕಾರಣಕ್ಕೇನೆ ರಥೋತ್ಸವದ ಜೊತೆಗೆ ಪ್ರತಿ ಅಮಾವಾಸ್ಯೆ, ಶ್ರಾವಣಮಾಸ, ಕಾರ್ತೀಕೋತ್ಸವ ಸಮಯಗಳಲ್ಲಿ ಭಕ್ತರ ಸಮೂಹವೇ ಬೆಟ್ಟದ ಮೇಲೆ ನೆರೆದಿರುತ್ತೆ.
ತಂಬ್ರಹಳ್ಳಿ, ಉತ್ತರ ತಂಬ್ರಹಳ್ಳಿ, ಚೀಲುಗೋಡು, ಸಿಗೇನಹಳ್ಳಿ, ಬನ್ನಿಗೊಳ, ಕೃಷ್ಣಾಪುರ, ಬಸರಕೋಡು, ಬಸರಕೋಡು ತಾಂಡ, ತೆಲುಗೋಳಿ, ರಾಮೇಶ್ವರ ಬಂಡಿ, ಕಿತ್ತನೂರು, ಮುತ್ಕೂರು ಸೇರಿದಂತೆ ಇಪ್ಪಾತ್ತಾರು ಊರುಗಳಲ್ಲಿ ಪ್ರತಿ ವರ್ಷ ಹೋಳಿ ಹುಣ್ಣಿಮೆ ದಿನದಂದು ಜರುಗುವ ಬಂಡೆರಂಗಪ್ಪನ ರಥೋತ್ಸವದ ಸಡಗರ,ಸಂಭ್ರಮ ನೆಲಸಿರುತ್ತೆ.
ಇನ್ನೂ, ರಥೋತ್ಸವದ ನಿಮಿತ್ತ ಬೆಳಿಗ್ಗೆ ಯಿಂದಲೇ ಬೆಟ್ಟದ ಮೇಲೆ ಕೆಳಗಡೆ ಸಂಭ್ರಮ ಮನೆ ಮಾಡಿತ್ತು. ಬೆಳಿಗ್ಗೆ ರಂಗನಾಥ ಸ್ವಾಮಿ ಹಾಗೂ ಲಕ್ಷ್ಮೀ ದೇವಿಗೆ ಪೂಜಾ ಕೈಂಕರ್ಯಗಳು ಶಾಸ್ತ್ರೋಕ್ತವಾಗಿ ಜರುಗಿದವು. ಹುಣ್ಣಿಮೆಯ ದಿನವಾಗಿದ್ದರಿಂದ ಬೆಳಿಗ್ಗೆ ಶ್ರೀ ಸ್ವಾಮಿಗೆ ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ಭಕ್ತರು ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದುಕೊಂಡರು.
ಬೆಟ್ಟದ ಕೆಳಗಡೆ, ರಥ ಬೀದಿಯಲ್ಲಿ ನಿಲ್ಲಿಸಲಾಗಿದ್ದ ರಥಕ್ಕೆ, ಮಲ್ಲಿಗೆ, ಕನಕಾಂಬರ, ಗುಲಾಬಿ, ಸೇವಂತಿಗೆ, ಚೆಂಡುಹೂ ಸೇರಿದಂತೆ ವಿವಿಧ ಹೂವುಗಳನ್ನು ಕಟ್ಟಿ, ಮಾಲೆಗಳನ್ನು ಹಾಕಿ ಭಕ್ತರ ಪ್ರೀತಿಯ ‘ರಂಗಪ್ಪ’ನ ರಥವನ್ನು ಸಿಂಗಾರಗೊಳಿಸಲಾಯ್ತು. ಬಾಳೆ ದಿಂಡು ಹಾಗೂ ವಿವಿಧ ಬಣ್ಣಗಳ ವಸ್ತ್ರಗಳಿಂದ ಅಲಂಕೃತ ಗೊಳಿಸಲಾಗಿದ್ದ ತೇರು ಭಕ್ತರನ್ನು ತನ್ನಡೆಗೆ ಆಕರ್ಷಿಸಿತು.
ಸಂಜೆ ಗ್ರಹಣದ ಸಮಯದಲ್ಲಿಯೇ
ವಿವಿಧ ವಾದ್ಯಘೋಷಗಳ ನಾದನದೊಂದಿಗೆ, ಭಕ್ತರ ಜಯಕಾರದೊಂದಿಗೆ ಸರ್ವಾಭರಣ ಅಲಂಕೃತ ಗೊಳಿಸಲಾಗಿದ್ದ ಶ್ರೀ ಬಂಡೇರಂಗನಾಥಸ್ವಾಮಿ ಅವರ ಉತ್ಸವ ಮೂರ್ತಿಯನ್ನು ಬೆಟ್ಟದ ಮೇಲಿಂದ ಮೆರವಣಿಗೆಯ ಮೂಲಕ ಕೆಳಗಡೆಗೆ ಕರೆತಂದು ರಥದ ಸುತ್ತಲೂ ಮೂರು ಸುತ್ತು ಪ್ರದಕ್ಷಿಣೆ ಹಾಕಿಸಿದ ಬಳಿಕ ತೇರಿನಲ್ಲಿ ಪ್ರತಿಷ್ಠಾಪನೆಗೊಳಿಸಲಾಯ್ತು.
ಆಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತಗಣದಿಂದ
ಲಕ್ಷ್ಮೀ.. ರಮಣಾ..ಗೋವಿಂದ… ಗೋವಿಂದಾ. ಎಂಬ ಜಯಘೋಷ ಮುಗಿಲು ಮುಟ್ಟುವಂತೆ ಮೊಳಗುತ್ತಿದ್ದಂತೆಯೇ ರಥ ರಾಜಗಂಭೀರ್ಯವಾಗಿ ಮುಂದೆ ಚಲಿಸಿತು. ವಿವಿಧೆಡೆಯಿಂದ ಅಗಮಿಸಿದ ಭಕ್ತರು ಬಾಳೆ ಹಣ್ಣು ಉತ್ತುತ್ತಿ ರಥಕ್ಕೆ ಎಸೆದು ಭಕ್ತಿ ಭಾವ ಮೆರೆದರು.
ಬಂಡೆ ರಂಗಪ್ಪನ ಕ್ಷೇತ್ರ ಭಕ್ತಿಯ ಜೊತೆಗೆ ಪ್ರವಾಸಿ ತಾಣವೂ ಹೌದಾಗಿದೆ. ಪ್ರತಿ ಮುಂಗಾರು ಮಳೆಯೊಂದಿಗೆ ಈ ಕ್ಷೇತ್ರಕ್ಕೆ ಪ್ರಾಕೃತಿಕ ಸೌಂದರ್ಯದ ಖಣಿ ಬರುತ್ತೆ. ತುಂಗಾಭದ್ರ ಜಲಾಶಯದ ಹಿನ್ನೀರು ವರ್ಷದಲ್ಲಿ ಕನಿಷ್ಠ ಐದಾರು ತಿಂಗಳು ಕಾಲ ಈ ಕ್ಷೇತ್ರವನ್ನು ಸುತ್ತೂವರೆದಿರುತ್ತೆ. ಆ ಸಮಯ ನಿಜಕ್ಕೂ ವರ್ಣಾತೀತಾವೆ ಸರಿ. ಈ ಸಮಯದಲ್ಲಿ ಆಫ್ ಡೇ ಔಟಿಂಗ್, ಪಿಕ್ನಿಕ್ ಗೆ ಪ್ರಾಶಸ್ತ್ಯವಾಗಿರುತ್ತೆ.
ಪ್ರಕೃತಿಯ ಚೆಲುವಿನ ಜೊತೆಗೆ ಹರಪನಹಳ್ಳಿ ಪಾಳೆಗಾರರ ಆಡಳಿತಾಧಿಕಾರಿ ಓಬಪ್ಪನಾಯಕ ಕಟ್ಟಿಸಿರುವ ಕಲಾತ್ಮಕವಾದ ಓಬ್ಬಳಪ್ಪನ ಬಾವಿ, ವಿಜಯನಗರ ಮತ್ತು ಹರಪನಹಳ್ಳಿ ಪಾಳೆಗಾರರ ಶೈಲಿಯಲ್ಲಿ ನಿರ್ಮಿಸಿರುವ ಶ್ರೀ ಬಂಡೆ ರಂಗನಾಥಸ್ವಾಮಿ ಮತ್ತು ಲಕ್ಷ್ಮೀದೇವಿಯರ ದೇವಸ್ಥಾನ, ತಂಗಾಳಿಗೋಪುರಗಳು ನೋಡುಗರನ್ನು ಆಕರ್ಷಿಸುತ್ತವೆ.
ಇತ್ತ, ರಥೋತ್ಸವಕ್ಕೂ ಮುನ್ನ ಶ್ರೀ ಬಂಡೆರಂಗನಾಥಸ್ವಾಮಿ ಅವರ ಹೆಸರಿನಲ್ಲಿ ಪಟಾಕ್ಷಿಯ ಬಹಿರಂಗವಾಗಿ ಹರಾಜು ಪ್ರಕ್ರಿಯೆ ನೇರವೇರಿತು. ಕೊಪ್ಪಳದ ರಂಗಪ್ಪ ಪೂಜಾರ ಎನ್ನುವ ಭಕ್ತರೊಬ್ಬರು 301101 ರೂಗಳಿಗೆ ಪಟಾಕ್ಷಿಯನ್ನು ಪಡೆದುಕೊಂಡರು.
ರಥೋತ್ಸವ ಹಿನ್ನೆಲೆಯಲ್ಲಿ ಸ್ಥಳೀಯ ಆರೋಗ್ಯ ಕೇಂದ್ರದ ಸಿಬ್ಬಂದಿಯವರು ರಕ್ತ ದಾನ ಶಿಬಿರ ಹಮ್ಮಿಕೊಂಡಿದ್ದರು. ವಿವಿಧ ಸಂಘ,ಸಂಸ್ಥೆಯವರು ಉಚಿತ ಮಜ್ಜಿಗೆ,ನೀರಿನ ಅರವಟ್ಟಿಗೆ ತೆರೆದು ಭಕ್ತರ ದಾಹ ನಿಗಿಸುವ ಸೇವಾಕಾರ್ಯ ಮಾಡಿದರು.
ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ ಹಗರಿಬೊಮ್ಮನಹಳ್ಳಿ ಸಿಪಿಐ ವಿಕಾಸ್ ಲಮಾಣಿ ನೇತೃತ್ವದಲ್ಲಿ ಪೊಲೀಸರು ಯಶಸ್ವಿ ರಥೋತ್ಸವಕ್ಕೆ ಶ್ರಮಿಸಿದರು.
ಚಿತ್ರಗಳು: ಪರುಶುರಾಮ ಸುಣಗಾರ, ತಂಬ್ರಹಳ್ಳಿ.
- ಹುಳ್ಳಿಪ್ರಕಾಶ, ಸಂಪಾದಕರು,9448234961

