- ಸುನಾಮಿನ್ಯೂಸ್, ಜೂನ್,22
- ಬೆಂಗಳೂರು
* ಹುಳ್ಳಿಪ್ರಕಾಶ, ಸಂಪಾದಕರು
ಭಾನುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದು ‘ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ)ಯ’ ನೂತನ ಅಧ್ಯಕ್ಷರಾದ ಬಿಕೆ.ಹರಿಪ್ರಸಾದ್ ಅವರ ಪದಗ್ರಹಣ ಸಮಾರಂಭವಾಗಿದ್ದರೂ, ಆದರೇ ಅಕ್ಷರಶಃ ಅಲ್ಲಿ ನಡೆದಿದ್ದು ಮಾತ್ರ ಲಕ್ಷಾಂತರ ಕಾರ್ಯಕರ್ತರ ಸಂಗಮಿಸಿದ ‘ಕಾಂಗ್ರೆಸ್ ಕುಂಭಮೇಳ!
ಕನ್ನಡ ಹಿರಿಯ ಪತ್ರಕರ್ತರಾದ ಡಿ.ಉಮಾಪತಿ ಅವರು ‘ ಕಾಂಗ್ರೆಸ್ ಕಾಲಾಳು! ಕರ್ನಾಟಕದಲ್ಲಿ ಪಕ್ಷದ ತಲೆಯಾಳು’ ಎಂದು ಕರ್ನಾಟಕದ ಪಿಸಿಸಿ ನೂತನ ಸಾರಥಿಯ ಕುರಿತಂತೆ ವಿಶ್ಲೇಷಿಸಿದ್ದಾರೆ. ತಮ್ಮ ಅಧಿಕಾರ ಸ್ವೀಕಾರ ಕಾರ್ಯಕ್ರಮ ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ‘ಕಾಂಗ್ರೇಸ್ ಹಬ್ಬ’ ವಾಗುತ್ತದೆ ಎಂದು ಸ್ವತಹ ಬಿಕೆ.ಹರಿಪ್ರಸಾದ್ ಅವರು ಕೂಡ ನಿರೀಕ್ಷೆ ಮಾಡಿರಲಿಕ್ಕಿಲ್ಲ!
ಭಾನುವಾರ ಮುಂಜಾನೆ ಯಿಂದ ಸಂಜೆ ವರೆಗೂ ಅರಮನೆ ಮೈದಾನದಲ್ಲಿ ಇದ್ದಿದ್ದು ಮಾತ್ರ ಥೇಟ್ ಕುಂಭಮೇಳದಂತಹ ಕಾಂಗ್ರೆಸ್ ಕಾರ್ಯಕರ್ತರ ಮಹಾ ಸಮ್ಮಿಲನ! ಕಾರ್ಯಕರ್ತರ ಈ ಮಹಾ ಸಂಗಮದ ಶಕ್ತಿ, ಕರ್ನಾಟಕದಲ್ಲಿ 2028ಕ್ಕೆ ಪುನಃ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರದಲ್ಲಿರಸಲು ನೂತನ ಪಿಸಿಸಿ ಅಧ್ಯಕ್ಷರಿಗೆ ಹುರುಪು, ಉತ್ಸಾಹ, ಮಹಾಶಕ್ತಿಯನ್ನು ಭರ್ತಿಗೊಳಿಸಿತು ಕೂಡ ಎನ್ನಬಹುದು.
ಭಾನುವಾರ, ಅರಮನೆಯನ್ನು ಸಂಪರ್ಕಿಸುವ ರಾಜಧಾನಿಯ ಎಲ್ಲಾ ರಸ್ತೆಗಳು ಬೆಳಗಿನಿಂದಲೇ ಕಾಂಗ್ರೆಸ್ ಧ್ವಜಾಧಾರಿ ಕೈ ಕಾರ್ಯಕರ್ತರಿಂದ ತುಂಬಿ ತುಳುಕುತ್ತಿದ್ದವು. ಹನ್ನೊಂದು ಗಂಟೆಗೆಲ್ಲ ಕತ್ತೇತ್ತಿ ನೋಡಿದ ಕಡೆಗೆಲ್ಲ ‘ಹಸ್ತ’ದ ಚಿಹ್ನೆ ಸಹಿತ ಸೋನಿಯಾಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿಎಂ ಡಿಕೆ.ಶಿವಕುಮಾರ್, ನೂತನ ಪಿಸಿಸಿ ಅಧ್ಯಕ್ಷ ಬಿಕೆ.ಹರಿಪ್ರಸಾದ್ ಸಹಿತ ಕಾಂಗ್ರೆಸ್ ವರಿಷ್ಠರ ಭಾವಚಿತ್ರಗಳ ಸಾಲು,ಸಾಲೇ ಎದ್ದು ನಿಂತಿದ್ದು ಕಾಣಿಸುತ್ತಿತ್ತು!
ಇಲ್ಲಿ, ಬಲವಂತವಾಗಿ ಕರೆದು ಕೊಂಡು ಬಂದವರಿಗಿಂತಲೂ ಸ್ವಯಂ ಪ್ರೇರಿತರಾಗಿ ಬಂದವರ ಸಂಖ್ಯೆಯೇ ಅಧಿಕವಿತ್ತು! ಈ ಕಾರಣಕ್ಕೇನೆ ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ ಎನ್ನುವುದು ‘ ಕಾಂಗ್ರೆಸ್ ಕಾರ್ಯಕರ್ತರ ಹಬ್ಬ’ ವಾಗಲು ಸಾಧ್ಯವಾಗಿದ್ದು.
ಉತ್ತರ ಹಾಗು ಕಲ್ಯಾಣ ಕರ್ನಾಟಕದ ಕಡೆಯವರೂ ಶನಿವಾರ ರಾತ್ರಿಯೇ ರಾಜಧಾನಿಯತ್ತ ಪಯಾಣ ಆರಂಭಿಸಿ, ಬೆಳಗಿನ ವೇಳೆಗೆಲ್ಲ ರಾಜಧಾನಿ ಸೇರಿಕೊಂಡರೇ ಇತ್ತ ಬೆಂಗಳೂರಿಗೆ ಹತ್ತೀರದ ಸುತ್ತಲಿನ ಜಿಲ್ಲೆಗಳಿಂದ ಬೆಳಿಗ್ಗೆ ಪಯಾಣ ಆರಂಭಿಸಿ ಹನ್ನೊಂದು ಗಂಟೆಗೆಲ್ಲ ಅರಮನೆ ತಲುಪಿದರು.
ಕರ್ನಾಟಕದ ಮೂಲೆ,ಮೂಲೆಗಳಿಂದ ಅಭಿಮಾನ ಇಟ್ಟುಕೊಂಡು ಬಂದಿದ್ದ ಲಕ್ಷಾಂತರ ಕಾರ್ಯಕರ್ತರ ಮುಗಿಲು ಮುಟ್ಟುವ ಜಯಘೋಷ, ಕೇಕೆ, ಚಪ್ಪಾಳೆ, ಶುಭ ಹಾರೈಕೆಗಳ ನಡುವೆ ಹಿಂದುಳಿದವರ್ಗಗಳ ನೇತಾರರಾದ ಬಿಕೆ. ಹರಿಪ್ರಸಾದ್ ಅವರ ಕೈಗೆ ನಿರ್ಗಮಿತ ಅಧ್ಯಕ್ಷರು, ರಾಜ್ಯದ ಮುಖ್ಯಮಂತ್ರಿಗಳು ಆದ ಡಿಕೆ.ಶಿವಕುಮಾರ ಅವರು ಕಾಂಗ್ರೆಸ್ ಧ್ವಜವನ್ನು ಹಸ್ತಾಂತರ ಮಾಡಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, ಡಿಸಿಎಂ ಡಾ.ಜಿ.ಪರಮೇಶ್ವರ, ಮಾಜಿ ಸಿಎಂ ಸಿದ್ದರಾಮಯ್ಯ ಸಹಿತ ಸಚಿವರು,ಶಾಸಕರು, ಪಕ್ಷದ ಹಿರಿಯ,ಕಿರಿಯ ಮುಖಂಡರುಗಳು, ಡಿಸಿಸಿ, ಬಿಸಿಸಿ ಅಧ್ಯಕ್ಷರುಗಳು ಸಹಿತ ಸಾವಿರಾರು ಮುಖಂಡರುಗಳು ಪದಗ್ರಹಣದಲ್ಲಿ ಹಾಜರಿದ್ದು ಬಿಕೆ.ಹರಿಪ್ರಸಾದ್ ಅವರ ಅಧಿಕಾರ ಸ್ವೀಕಾರವನ್ನು ಸಾಕ್ಷಿಕರಿಸಿದರು.
- ಹುಳ್ಳಿಪ್ರಕಾಶ, ಸಂಪಾದಕರು, ಸುನಾಮಿನ್ಯೂಸ್, ಬೆಂಗಳೂರು.
