HomeUncategorizedಎಸ್ಸಿ,ಎಸ್ಟಿ ಮೀಸಲು ಹೆಚ್ಚಳ; 9ನೇ ಪರಿಚ್ಛೇದಕ್ಕೆ ಸೇರಿಸಲು ಕೇಂದ್ರದ ಮುಂದೆ ಸಂಸದ ತುಕಾರಾಂ ನೇತೃತ್ವದಲ್ಲಿ...

ಎಸ್ಸಿ,ಎಸ್ಟಿ ಮೀಸಲು ಹೆಚ್ಚಳ; 9ನೇ ಪರಿಚ್ಛೇದಕ್ಕೆ ಸೇರಿಸಲು ಕೇಂದ್ರದ ಮುಂದೆ ಸಂಸದ ತುಕಾರಾಂ ನೇತೃತ್ವದಲ್ಲಿ ಬದ್ಧತೆಯ ಪ್ರದರ್ಶನ!

  • ಸುನಾಮಿನ್ಯೂಸ್, ಮಾರ್ಚ್,14
  • ನವದೆಹಲಿ

* ಹುಳ್ಳಿಪ್ರಕಾಶ, ಸಂಪಾದಕರು

ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮಕ್ಕಳು ಮತ್ತು ಯುವಜನಾಂಗ ಭವಿಷ್ಯ ರೂಪಿಸಿಕೊಳ್ಳಲು ಈ ಸಮುದಾಯಗಳ ಮೀಸಲಾತಿ ಪ್ರಮಾಣವನ್ನು ರಾಜ್ಯ ಸರ್ಕಾರ ಹೆಚ್ಚಳ ಮಾಡಿದೆ. ಆದರೇ, ಸಂವಿಧಾನದ ಒಂಭತ್ತನೇಯ ಪರಿಚ್ಛೇದದಲ್ಲಿ ಇದು ಸೇರ್ಪಡೆಗೊಂಡರೆ ಮಾತ್ರವೇ ಹೆಚ್ಚಿಸಿರುವ ಮೀಸಲು ಸೌಲಭ್ಯದ ಫಲ ಎಸ್ಸಿ ಮತ್ತು ಎಸ್ಟಿ ಸಮುದಾಯಗಳಿಗೆ ಸಿಗಲು ಸಾಧ್ಯ.

ಇದು, ಪಂಚ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದಷ್ಟು ಸಲೀಸಾಗಿ ಸಂವಿಧಾನದ 9ನೇ ಪರಿಚ್ಛೇದದೊಳಕ್ಕೆ ಪ್ರವೇಶಿಸಲಾಗದು. ಇಲ್ಲಿ ನಿರಂತರ ಪ್ರಯತ್ನದ ಜೊತೆಗೆ ರಾಜಕೀಯ ಇಚ್ಛಾಶಕ್ತಿಯೂ ಅತೀ ಅಗತ್ಯ. ಆಳುವ ಕೇಂದ್ರ ಸರ್ಕಾರವನ್ನೆ ಮೆಚ್ಚಿಸುವ ರಾಜಕೀಯ ಇಚ್ಛಾಶಕ್ತಿ ಬೇಕು. ಪ್ರಧಾನಿಗಳ ಕೃಪೆ ಮತ್ತವರು ಪ್ರತಿನಿಧಿಸುವ ರಾಜಕೀಯ ಪಕ್ಷದ ಒಲವು ಕೂಡ ಇದರಲ್ಲಿ ಪ್ರಮುಖವಾದ ಪಾತ್ರವಹಿಸುತ್ತವೆ.

ಮೀಸಲು ಪ್ರಮಾಣದ ಹೆಚ್ಚಳವನ್ನು 9ನೇ ಪರಿಚ್ಛೇದಕ್ಕೆ ಸೇರಿಸಲು ಕೇಂದ್ರ ಸರ್ಕಾರದ ಗಮನಸೆಳೆಯುವಂತಹ ಗಂಭೀರವಾದ ಪ್ರಯತ್ನವೊಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಕ್ರಿಯಾಶೀಲರು ಮತ್ತು ಸದಾ ಜನರಪರ ವಾಗಿ ಪಾರ್ಲಿಮೆಂಟ್ ನಲ್ಲಿ ಧ್ಬನಿ ಎತ್ತುತ್ತಾ ಬರುತ್ತೀರುವ ಬಳ್ಳಾರಿ ಲೋಕಸಭಾ ಸದಸ್ಯರಾದ ಈ.ತುಕಾರಾಂ ಅವರ ನೇತೃತ್ವದಲ್ಲಿ ಆಗಿದೆ.

ಅವರು 9ನೇ ಪರಿಚ್ಛೇದದ ಆಳ ಮತ್ತು ಅಗಲದ ಬಗ್ಗೆ ಸಂಸದ ತುಕಾರಾಂ ಅವರು ಚೆನ್ನಾಗಿಯೇ ಅರಿತುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಲೋಕಸಭಾ ಅಧಿವೇಶನದಲ್ಲಿ ಭಾಗವಹಿಸಿರುವ ಅವರು, ರಾಯಚೂರು ಸಂಸದರಾದ ಜಿ.ಕುಮಾರನಾಯಕ, ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಚಿಕ್ಕೋಡಿ ಸಂಸದೆ ಪ್ರಿಯಾಂಕ ಜಾರಕಿಹೊಳಿ, ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ, ಚಾಮರಾಜನಗರ ಎಂಪಿ ಸುನೀಲ್ ಬೋಸ್ ಅವರನ್ನು ಒಟ್ಟಿಗಿಟ್ಟುಕೊಂಡು ಕೇಂದ್ರ ಸಚಿವರನ್ನು ಭೇಟಿ ಮಾಡಿ, ಚರ್ಚಿಸಿದ್ದಾರೆ.

ಕರ್ನಾಟಕದಲ್ಲಿ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡದ ಸಮುದಾಯಗಳಿಗೆ ನ್ಯಾಯಸಮ್ಮತ ಪ್ರತಿನಿಧಿತ್ವ ಹಾಗೂ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುವ ಉದ್ದೇಶ ದಿಂದ ಮೀಸಲಾತಿ ಪ್ರಮಾಣವನ್ನು ಶೇ, 50 ರಿಂದ ಶೇಕಡ 56ಕ್ಕೆ ಹೆಚ್ಚಿಸಿ ಕರ್ನಾಟಕ ರಾಜ್ಯ ಸರ್ಕಾರ ಕಾಯ್ದೆಯನ್ನು ಮಾಡಿದೆ. ಇದು ಸಂವಿಧಾನದ 9ನೇ ಅನುಸೂಚಿಗೆ ಸೇರಿಸಿದಾಗ ಮಾತ್ರವೇ ಈ ಕಾಯ್ದೆಗೆ ಸಂವಿಧಾನದ ರಕ್ಷಣೆ ಸಿಕ್ಕು, ಆ ಮೂಲಕ ಎಸ್ಸಿ ಮತ್ತು ಎಸ್ಟಿ ಸಮುದಾಯಗಳಿಗೆ ನ್ಯಾಯ ಕಲ್ಪಿಸಿ, ಅವರಿಗೆ ಉಜ್ವಲ ಭವಿಷ್ಯ ರೂಪಿಸಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದ ಡಾ. ವೀರೇಂದ್ರ ಕುಮಾರ್ ಅವರಿಗೆ ಸಂಸದ ತುಕಾರಾಂ ನೇತೃತ್ವದ ಸಂಸದರ ತಂಡ ಸ್ಪಷ್ಟವಾಗಿ ಮನವರಿಕೆ ಮಾಡಿಕೊಟ್ಟಿದೆ.

ಇದಕ್ಕೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರು ಪೂರಕವಾಗಿ ಸ್ಪಂದಿಸಿ, ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವರು ಮತ್ತು ನಾವು ಒಟ್ಟಾಗಿ ಸೇರಿ ಚರ್ಚಿಸಿ ಸೂಕ್ತ ಕ್ರಮವನ್ನು ತೆಗೆದುಕೊಳ್ಳುವುದಾಗಿ ತುಕಾರಾಂ ನೇತೃತ್ವದ ಸಂಸದರ ತಂಡಕ್ಕೆ ಕೇಂದ್ರ ಸಾಮಾಜಿಕ ನ್ಯಾಯ, ಸಬಲೀಕರಣ ಸಚಿವರು ಖಚಿತ ಭರವಸೆ ಕೊಟ್ಟಿದ್ದಾರೆ.

ಸಚಿವರ ಭರವಸೆ, ಕರ್ನಾಟಕದಲ್ಲಿ ಮೀಸಲು ಹೆಚ್ಚಳಕ್ಕಾಗಿ ಹಲವು ದಶಕಗಳಿಂದಲೂ ಕಾಯುತ್ತೀರುವ ಎಸ್ಸಿ, ಎಸ್ಟಿ ಸಮುದಾಯಗಳಲ್ಲಿ ಹೆಚ್ಚಿಸಿದ ಮೀಸಲಾತಿಗೆ ಸಂವಿಧಾನದ ರಕ್ಷಣೆ ಸಿಗುವ ಆಶಯವನ್ನು ಜೋರಾಗಿಯೇ ಮೂಡುವಂತೆ ಮಾಡಿದೆ.

ಏಕೆಂದರೆ, ಹಲವು ದಶಕಗಳಿಂದಲೂ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಎಸ್ಸಿ,ಎಸ್ಟಿ ಸಮುದಾಯಗಳು ಸಾಕಷ್ಟು ವಂಚಿತರಾಗುತ್ತಲೆ ಬರುತ್ತೀವೆ. ದಲಿತ–ಆದಿವಾಸಿ ಸಮುದಾಯದ ಮಕ್ಕಳ ಶಿಕ್ಷಣ, ಉದ್ಯೋಗ ಮತ್ತು ಸಮಾನ ಅವಕಾಶಗಳ ಭವಿಷ್ಯವನ್ನು ಮೀಸಲು ಪ್ರಮಾಣದ ಹೆಚ್ಚಳದ ಸಮರ್ಪಕವಾದ ಜಾರಿ, ಅನುಷ್ಠಾನ ದಿಂದ ಮಾತ್ರವೇ ಸುರಕ್ಷಿತಗೊಳಿಸಲು ಸಾಧ್ಯ. ಇದು ನಮ್ಮ ಸಂವಿಧಾನಿಕ ಬದ್ಧತೆಯು ಹೌದಾಗಿದೆ.

9ನೇ ಪರಿಚ್ಛೇದಕ್ಕೆ ಮೀಸಲು ಹೆಚ್ಚಿಸಿರುವ ಕಾಯ್ದೆಯನ್ನು ಸೇರ್ಪಡೆಗೊಳಿಸಲು ಸಂಸದ ತುಕಾರಾಂ ಅವರ ಜೊತೆಗೆ ಕೈಜೋಡಿಸಿದ
ಸಂಸದರಾದ ಜಿ. ಕುಮಾರ್ ನಾಯಕ್, ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ, ರಾಜಶೇಖರ ಹಿಟ್ನಾಳ್, ಸುನಿಲ್ ಬೋಸ್, ಪ್ರಿಯಾಂಕಾ ಜಾರಕಿಹೋಳಿ ಅವರುಗಳ ಕಾರ್ಯಕ್ಕೆ ಎಸ್ಸಿ,ಎಸ್ಟಿ ಸಮುದಾಯಗಳು ಮೆಚ್ಚುಗೆ ವ್ಯಕ್ತಪಡಿಸಿವೆ.

  • ಹುಳ್ಳಿಪ್ರಕಾಶ, ಸಂಪಾದಕರು,9448234961
RELATED ARTICLES
- Advertisment -

Most Popular

Recent Comments