- ಸುನಾಮಿನ್ಯೂಸ್, ಮೇ,12,2026
- ಹಗರಿಬೊಮ್ಮನಹಳ್ಳಿ/ವಿಜಯನಗರ
* ಹುಳ್ಳಿಪ್ರಕಾಶ, ಸಂಪಾದಕರು
ಎಫ್ ಡಿಎ ಮನೆಗಳ್ಳತನದ ಪ್ರಕರಣವನ್ನು ಪತ್ತೆ ಮಾಡಲು ಬೆನ್ನತ್ತಿದಾಗ ಅದರ ಜೊತೆಗೆ ಇನ್ನೂ ಮೂರು ಮನೆಗಳ್ಳತನಗಳು ಪತ್ತೆ ಆಗಿದ್ದು. ಒಟ್ಟು ನಾಲ್ಕು ಮನೆಗಳ್ಳತನವನ್ನು ಪತ್ತೆಹಚ್ಚಿ, ಇಬ್ಬರು ಕಳ್ಳರನ್ನು ಬಂಧಿಸಿ, ಕಳುವಾದ ಬೆಲೆ ಬಾಳುವ ಬಂಗಾರ,ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ವಿಜಯನಗರ ಜಿಲ್ಲೆ ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶ ದೊಡ್ಡಮನಿ ನೇತೃತ್ವದ ಹಗರಿಬೊಮ್ಮನಹಳ್ಳಿ ಪೊಲೀಸ್ ವಲಯದ ಸಿಪಿಐ ವಿಕಾಸ್ ಲಮಾಣಿ ಮತ್ತು ಕ್ರೈಂ ಪೊಲೀಸರ ತಂಡ ಸಫಲರಾಗಿದ್ದಾರೆ.
ಹಗರಿಬೊಮ್ಮನಹಳ್ಳಿ ತಾಲೂಕಿನ ಗದ್ದಿಕೇರಿ ಗ್ರಾಮದ ಕುಮಾರಹಳ್ಳಿ ಅನಂದ(24) ಹಾಗು ಅರಳಿಹಳ್ಳಿಯ ಜಹಾಂಗೀರ್ (36) ಬಂಧಿತ ಇಬ್ಬರು ಮನೆಗಳ್ಳರು. ಈ ಪೈಕಿ ಜಹಾಂಗೀರ್ ಈ ಮೊದಲು ಎರಡು ಬೈಕ್ ಹಾಗು ಒಂದು ಮನೆಗಳ್ಳತನದ ಪ್ರಕರಣದಲ್ಲಿ ಬಂಧಿತನಾಗಿದ್ದ.
ಬೇಸಿಗೆ ಸಮಯದಲ್ಲಿ ಮಕ್ಕಳ ರಜೆಯನ್ನು ಆನಂದಿಸುವ ಸಮಯದಲ್ಲಿ ಮನೆಗಳಿಗೆ ಕನ್ನ ಹೊಡೆಯುವ ಮೂಲಕ ಹಗರಿಬೊಮ್ಮನಹಳ್ಳಿ ಪೊಲೀಸ್ ವಲಯದಲ್ಲಿ
ಸಾರ್ವಜನಿಕರ ನೆಮ್ಮದಿಗೆ ಕಂಟಕರಾಗಿದ್ದ ಮನೆಗಳ್ಳರನ್ನು ಹೆಡೆಮುರಿಗಿ ಕಟ್ಟಿ, ಜೈಲಿನಲ್ಲಿ ಮುದ್ದೆ ಮುರಿಯುವಂತೆ ಮಾಡಿರುವ ಡಿವೈಎಸ್ಪಿ ಮಲ್ಲೇಶ ದೊಡ್ಡಮನಿ ಮತ್ತವರ ತಂಡಕ್ಕೆ ಸಾರ್ವಜನಿಕರು ಮೆಚ್ಚುಗೆ ಸೂಚಿಸಿದ್ದಾರೆ.
ಇತ್ತ, ಒಟ್ಟಾರೆ ರೂ, 14.06 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು, ಇಬ್ಬರು ಮನೆಗಳ್ಳರನ್ನು ಬಂಧಿಸಿ, ಜೈಲಿನಲ್ಲಿ ಮುದ್ದೆ ಮುರಿಯಲು ಕಳಿಸಿ, ಆ ಮೂಲಕ ಕಳ್ಳತನ ದಿಂದ ನೊಂದಿದ್ದ ದೂರುದಾರರಿಗೆ ತ್ವರಿತಗತಿಯಲ್ಲಿಯೇ ನೆಮ್ಮದಿಯ ಫಲಿತಾಂಶ ನೀಡಿರುವ ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶ ದೊಡ್ಡಮನಿ ನೇತೃತ್ವದ ಹಗರಿಬೊಮ್ಮನಹಳ್ಳಿ ಸಿಪಿಐ ವಿಕಾಸ್ ಲಮಾಣಿ, ಪಟ್ಟಣ ಠಾಣೆಯ ಪಿಎಸ್ಐ ಉಮಾಪತಿನಾಯ್ಕ್, ಮರಿಯಮ್ಮನಹಳ್ಳಿ ಠಾಣೆಯ ಪಿಎಸ್ಐ ತಾರಾಬಾಯಿ, ತಂಬ್ರಹಳ್ಳಿ ಠಾಣೆಯ ಪಿಎಸ್ಐ ನಾಗರಾಜ ಕೊಟಗಿ ಅಧಿಕಾರಿಗಳ ತಂಡಕ್ಕೆ
ಹಾಗು ಇವರ ನೇತೃತ್ವದಲ್ಲಿರುವ ತಂಬ್ರಹಳ್ಳಿ ಠಾಣೆಯ ಕಿರಣ್ ಕುಮಾರ್, ಹಗರಿಬೊಮ್ಮನಹಳ್ಳಿ ಠಾಣೆಯ ರಾಮಾಂಜನೇಯ, ಹೆಗ್ಗಪ್ಪ, ಎಂ.ಮಹೇಶ, ದೊಡ್ಡಬಸಪ್ಪ, ಸುರೇಶಕುಮಾರ, ಹನುಮಂತಪ್ಪ ಕ್ರೈಂ ವಿಭಾಗದ ಸಿಬ್ಬಂದಿಗಳ ಕಾರ್ಯಕ್ಕೆ ವಿಜಯನಗರ ಜಿಲ್ಲಾ ಪೊಲೀಸ್ ಅಧಿಕ್ಷಕರಾದ ಎಸ್.ಜಾಹ್ನವಿ, ಹೆಚ್ಚುವರಿ ಎಸ್ಪಿ ಮಂಜುನಾಥ ಅವರು ಪ್ರಶಂಸೆ ವ್ಯಕ್ತ ಪಡಿಸಿ, ಅಭಿನಂದಿಸಿದ್ದಾರೆ.
ಪ್ರಕರಣದ ಹಾದಿ: ಇದೇ ಜನವರಿ ಹತ್ತರಂದು, ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಟಿಎಂ. ಚನ್ನಬಸಯ್ಯ ಎಂಬುವರ ಮನೆಗಳ್ಳತನವಾದ ಪ್ರಕರಣ ಜರುಗಿತ್ತು. ಈ ಪ್ರಕರಣವನ್ನು ಭೇದಿಸಲು ಕಾರ್ಯಪ್ರವೃತ್ತರಾದ ಸಮಯದಲ್ಲಿ ಆನಂದ ಹಾಗು ಜಹಾಂಗೀರ್ ಪೊಲೀಸರು ಹೆಣೆದ ಬಲೆಗೆ ಸಿಕ್ಕಿಹಾಕಿಕೊಂಡರು. ಅವರನ್ನು ಪೊಲೀಸ್ ತನಿಖೆಗೆ ಒಳಪಡಿಸಿದಾಗ ಚನ್ನಬಸಯ್ಯರ ಜೊತೆಗೆ ಹಗರಿಬೊಮ್ಮನಹಳ್ಳಿ ಪಟ್ಟಣ, ಮರಿಯಮ್ಮನಹಳ್ಳಿ ಹಾಗು ತಂಬ್ರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಗಿದ್ದ ಮೂರು ಮನೆಗಳ್ಳತನದ ಬಗ್ಗೆಯೂ ಬಂಧಿತರು ಬಾಯಿ ಬಿಟ್ಟಿದ್ದಾರೆ.
ಬಂಧಿತರಿಂದ ರೂ, 12.56 ಲಕ್ಷ ಮೌಲ್ಯದ 96.54 ಗ್ರಾಂ ಚಿನ್ನಾಭರಣ ಮತ್ತು ರೂ,1.50 ಲಕ್ಷ ಮೌಲ್ಯದ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿಜಯನಗರ ಎಸ್ಪಿ ಎಸ್.ಜಾಹ್ನವಿ ಅವರು ಪತ್ರಿಕೆ ತಿಳಿಸಿದ್ದಾರೆ.
- ಹುಳ್ಳಿಪ್ರಕಾಶ, ಪತ್ರಕರ್ತರು. 9448234961
