* ಸುನಾಮಿನ್ಯೂಸ್, ಜುಲೈ,25
ಈಗ ಉದ್ಭವಿಸಿರುವ ಯೂರಿಯಾ ರಸ ಗೊಬ್ಬರದ ಕೊರತೆಯ ಸಮಸ್ಯೆ ಕೃತಕವಾಗಿದ್ದು, ಇನ್ನೂ 200-300 ಟನ್ ಯೂರಿಯಾ ಬಂದರೇ ಎಲ್ಲವೂ ಸರಿಹೋಗುತ್ತೆ. ತ್ವರಿತವಾಗಿ ಇಲಾಖೆ ಗೊಬ್ಬರವನ್ನು ಪೂರೈಸಲಿದೆ. ಗೊಬ್ಬರ ಸಿಗಲಾರದು ಎಂದು ಹುಟ್ಟಿಕೊಂಡಿರುವ ಸುಳ್ಳು ವದಂತಿಗಳನ್ನು ನಂಬಿ ಯೂರಿಯಾ ಖರಿದಿಗೆ ಯಾರು ಕೂಡ ಆತುರ ತೋರಬೇಡಿ ಎಂದು ಹಗರಿಬೊಮ್ಮನಹಳ್ಳಿ ಸಹಾಯಕ ಕೃಷಿ ನಿರ್ದೇಶಕರಾದ ಸುನೀಲ್ ನಾಯ್ಕ್ ತಾಲೂಕಿನ ಅನ್ನದಾತರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈ ಸಲ ತಾಲೂಕಿನಲ್ಲಿ ಪೂರ್ವ ಮುಂಗಾರು ಮಳೆ ಉತ್ತಮವಾಗಿ ಸುರಿದ ಪರಿಣಾಮ ದಿಂದಾಗಿ ಬಿತ್ತನೆ ಕಾರ್ಯವೂ ಕೂಡ ವಾಡಿಕೆ ಬಿತ್ತನೆ ಗಿಂತಲೂ ಹದಿನೈದು ದಿನ ಕ್ಕಿಂತಲೂ ಮುಂಚಿತವಾಗಿಯೇ ಶುರುವಾಯ್ತು. ಈಗೇ ಮುಂಚಿತವಾಗಿ ಬಿತ್ತನೆ ಆದ ಕಾರಣಕ್ಕೇನೆ ವಾಡಿಕೆಯ ಬೇಡಿಕೆ ಗಿಂತಲೂ ರೈತ ರಿಂದ ಹೆಚ್ಚಿನ ಬೇಡಿಕೆ ಬಂದಿದ್ದು ಕೂಡ ಯೂರಿಯಾ ರಸ ಗೊಬ್ಬರದ ಕೊರತೆ ಉಂಟಾಗಲು ಕಾರಣವಾಗಿದೆ ಎಂದರು.
ತಾಲೂಕಿನಾದ್ಯಂತ ಉದ್ಭವಿಸಿರುವ ಯೂರಿಯಾ ರಸ ಗೊಬ್ಬರದ ಸಮಸ್ಯೆ ಕುರಿತಂತೆ ಶುಕ್ರವಾರ ಸಂಜೆ ‘ಸುನಾಮಿನ್ಯೂಸ್’ ಜೊತೆಗೆ ಅವರು ಮಾತನಾಡಿ, ಯೂರಿಯಾ ಕೊರತೆಗೆ ಪೂರಕವಾದ ಕಾರಣಗಳನ್ನು ವಿವರಿಸಿದರು.
ಸದ್ಯ ಪೂರ್ವ ಮುಂಗಾರಿನಲ್ಲಿ ಆಗಿರುವ ಬಿತ್ತನೆಗೆ 45 ದಿನಗಳು ಆಗಿದೆ. ಇತ್ತ ವಾಡಿಕೆಯಂತೆ ಆಗಿರುವ ಬಿತ್ತನೆಗೆ ಕನಿಷ್ಠ 30 ದಿನಗಳು ಸಂದಿವೆ. ಪೂರ್ವದಲ್ಲಿ ಬಿತ್ತಿರುವ ಬೆಳೆಗೆ ಎರಡನೇಯ ಮೇಲು ಗೊಬ್ಬರವಾಗಿಯೂ, ಇತ್ರ ವಾಡಿಕೆ ಬಿತ್ತನೆಗೂ ಮೊದಲ ಮೇಲು ಗೊಬ್ಬರವಾಗಿಯೂ ಯೂರಿಯಾ ರಸ ಗೊಬ್ಬರ ಅಗತ್ಯವಿದೆ. ಎರಡು ಬೆಳೆಗಾರರು ಏಕಕಾಲದಲ್ಲಿ ಬೇಡಿಕೆ ಸಲ್ಲಿಸಿದ್ದರಿಂದ ಇದ್ದಕ್ಕಿದ್ದಂತೆಯೇ ಯೂರಿಯಾ ಕೊರತೆ ಉಂಟಾಗಲು ಇದು ಒಂದು ಕಾರಣವಾಗಿದೆ.
ಇನ್ನೂ, ಈ ಸಲ ತಾಲೂಕಿನಲ್ಲಿ ಹಿಂದಿನ ವರ್ಷಕ್ಕಿಂತಲೂ ಈ ವರ್ಷ ಸುಮಾರು ಹತ್ತ ರಿಂದ ಹದಿನೈದು ಸಾವಿರ ಎಕರೆ ಕೃಷಿಭೂಮಿಯಲ್ಲಿ ಮೆಕ್ಕೆಜೋಳ ಹೆಚ್ಚುವರಿ ಬಿತ್ತನೆ ಆಗಿದೆ. ಈ ಹೆಚ್ಚುವರಿ ಬಿತ್ತನೆ ಕೂಡ ರಸಗೊಬ್ಬರದ ಕೊರತೆಯ ಮೇಲೆ ಅಡ್ಡ ಪರಿಣಾಮ ಬೀರಿದೆ ಎಂದರು.
ಮೂರನೇಯದಾಗಿ, ಹಲವು ರೈತರು ಏಪ್ರಿಲ್ ತಿಂಗಳಿನಿಂದಲೇ ಯೂರಿಯಾ ಸ್ಟಾಕ್ ಮಾಡಲು ಶುರುಮಾಡಿದ್ದು ಕೂಡ ಮಾರುಕಟ್ಟೆಯಲ್ಲಿ ರಸಗೊಬ್ಬರದ ಪೂರೈಕೆಯ ಮೇಲೆ ದಿಢೀರ್ ಕೊರತೆಯನ್ನುಂಟು ಮಾಡಿತು. ಆಗೇನೆ ಮುಂದೆ ಯೂರಿಯಾ ಸಿಗಲ್ಲ ಎನ್ನುವ ಹಲವು ಸುಳ್ಳು ವದಂತಿಗಳನ್ನು ನಂಬಿ ಯೂರಿಯಾ ಖರಿದಿಗೆ ನಾಮುಂದು, ತಾ ಮುಂದು ಎಂದು ರೈತರು ಮುಗಿಬಿದಿದ್ದು ಕೂಡ ಮಾರುಕಟ್ಟೆಯಲ್ಲಿ ಯೂರಿಯಾದ ಕೃತಕ ಅಭಾವಕ್ಕೆ ಅಸ್ಪದ ಮಾಡಿಕೊಟ್ಟಿದೆ ಎಂದರು ಸುನೀಲ್ ನಾಯ್ಕ್ .
ನಿಜ ಹೇಳಬೇಕೆಂದರೇ ನಮ್ಮ ತಾಲೂಕಿನಲ್ಲಿ ಯೂರಿಯಾ ಕೊರತೆ ಇಲ್ಲ. ಏಕೆಂದರೆ, ಪ್ರಸ್ತುತ ಶೇಕಡ 80-85 ರಷ್ಟು ಯೂರಿಯಾ ಕೊರತೆಯನ್ನು ಈಗಾಗಲೇ ನಿವಾರಿಸಲಾಗಿದೆ. ಇನ್ನೂ 200-300 ಟನ್ ಬಂದರೆ ಈಗ ಉದ್ಭವಿಸಿರುವ ಕೃತಕ ಅಭಾವ ನಿವಾರಣೆ ಆಗಲಿದೆ ಎಂದರು.
ಸರ್ಕಾರ ದಿಂದ ಇಲಾಖೆಯ ವಾರ್ಷಿಕ ಬೇಡಿಕೆ ಗಿಂತಲೂ ಹೆಚ್ಚು ಗೊಬ್ಬರವನ್ನು ಪೂರೈಸುತ್ತದೆ. ಯಾವುದೋ ವದಂತಿ ನಂಬಿ ಆತುರ ಪಡದೆ, ಸಾವಧಾನ ದಿಂದ ಇದ್ದರೇ ಅಗತ್ಯದಷ್ಟು ಯೂರಿಯಾ ರಸಗೊಬ್ಬರ ಎಲ್ಲಾ ರೈತರಿಗೂ ಸಿಗಲಿದೆ. ಇವತ್ತಿನ ಅಭಾವ ಪರಿಸ್ಥಿತಿಯಲ್ಲಿ ದಯವಿಟ್ಟು ಎಲ್ಲರೂ ಇಲಾಖೆಗೆ ಸಹಕಾರ ಕೋಡಬೇಕೆಂದು ಎಡಿಎ ಸುನೀಲ್ ನಾಯ್ಕ್ ತಾಲೂಕಿನ ಅನ್ನದಾತರಲ್ಲಿ ಮನವಿ ಮಾಡಿಕೊಂಡಿದ್ದಾರೆ.
- ಹುಳ್ಳಿಪ್ರಕಾಶ, ಸಂಪಾದಕರು, ಸುನಾಮಿನ್ಯೂಸ್, ಬೆಂಗಳೂರು.