* ಸುನಾಮಿನ್ಯೂಸ್, ಜುಲೈ, 25
‘ ಮನೆ,ಮನೆಗೆ ಪೊಲೀಸ್’ ನಮ್ಮ ಇಲಾಖೆಯ ವಿನೂತನ ಕಾರ್ಯಕ್ರಮವಾಗಿದ್ದು ಜನರಲ್ಲಿರುವ ಪೊಲೀಸ್ ಭಯವನ್ನು ನಿವಾರಿಸಿ, ಅವರ ಮೇಲೆ ಆಗುವ ಅನ್ಯಾಯವನ್ನು ಮುಕ್ತವಾಗಿ ಪೊಲೀಸ್ ರ ಮುಂದೆ ಹೇಳುವ ಧೈರ್ಯವನ್ನು ತುಂಬಿಸುವ ಕಾರ್ಯಕ್ರಮ ಇದಾಗಿದೆ ಎಂದು ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಎಸ್.ಜಾಹ್ನವಿ ಹೇಳಿದ್ದಾರೆ.
ಶುಕ್ರವಾರ ಸಂಜೆ ಹಗರಿಬೊಮ್ಮನಹಳ್ಳಿ ಪಟ್ಟಣದ ರಾಮನಗರದ ಗುರುಭವನದಲ್ಲಿ ಕೂಡ್ಲಿಗಿ ಪೊಲೀಸ್ ಉಪ ವಿಭಾಗ ಆಯೋಜಿಸಿದ್ದ ‘ ಮನೆ,ಮನೆಗೆ ಪೊಲೀಸ್’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಸ್ತುತ ಸಮಾಜದಲ್ಲಿ ಪೊಲೀಸ್ ಠಾಣೆಗೆ ಬಂದು ದೂರು ನೀಡಲು ಬರುವವರಿ ಗಿಂತಲೂ ಭಯ ದಿಂದ ದೂರ ಉಳಿಯುವವರೆ ಹೆಚ್ಚಿದ್ದಾರೆ. ಇದು ತಪ್ಪು ಮಾಡಿದವರಿಗೆ ವರದಾನವಾಗುತ್ತಿದೆ. ಇದನ್ನು ತಪ್ಪಿಸಲು, ನಿಜವಾದ ಅಪರಾಧಿ,ಆರೋಪಿಗಳಿಗೆ ಶಿಕ್ಷೆ ಆಗುವಂತೆ ಮಾಡಲು ನಮ್ಮ ಇಲಾಖೆ ಮನೆ,ಮನೆಗೆ ಪೊಲೀಸ್ ಎನ್ನುವ ಕಾರ್ಯಕ್ರಮವನ್ನು ಜಾರಿಗೊಳಿಸಿದೆ ಎಂದರು.
ಇದನ್ನು ಎಲ್ಲಾ ಸಾರ್ವಜನಿಕರು ಸದ್ಭಳಕೆ ಮಾಡಿಕೊಂಡು ನಿಮ್ಮ ವೈಯಕ್ತಿಕ ಇಲ್ಲವೆ ನಿಮ್ಮ ಮನೆ ಒಳಗೆ, ಹೊರಗೆ ಸುತ್ತ,ಮುತ್ತ ನಡೆಯುವ ಕಾನೂನು ಬಾಹೀರ ಚಟುವಟಿಕೆಗಳ ಬಗ್ಗೆ, ಮಕ್ಕಳು, ಮಹಿಳೆಯರ ಮೇಲಿನ ಹಲ್ಲೆ, ದೌರ್ಜನ್ಯ, ಅತ್ಯಾಚಾರ, ಕೊಲೆಗಳಂತಹ ಗಂಭಿರ ಅಪರಾಧಗಳ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಸಲು ನಿಮ್ಮಲ್ಲಿ ತಿಳುವಳಿಕೆ ಮೂಡಿಸಲು, ವ್ಯವಸ್ಥೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿಯೇ ನಮ್ಮ ಪೊಲೀಸರು ನಿಮ್ಮ ಮನೆಗಳಿಗೆ ಬರುತ್ತಾರೆ. ಅವರು ಬಂದಾಗ ಯಾವುದನ್ನು ಮುಚ್ಚಿಡದೆ ಧೈರ್ಯವಾಗಿ ಮಾಹಿತಿ ನೀಡಿ ಎಂದು ಎಸ್ಪಿ ಜಾಹ್ನವಿ ಅವರು ಸಭೆಯಲ್ಲಿ ಹಾಜರಿದ್ದ ಮಹಿಳೆಯರಲ್ಲಿ ಧೈರ್ಯ ತುಂಬುವ ಮಾತುಗಳನ್ನು ಆಡಿದರು.
ಮನೆ,ಮನೆಗೆ ಪೊಲೀಸ್ ಕಾರ್ಯಕ್ರಮದನ್ವಯ ನಿಮ್ಮ ಮನೆಗಳಿಗೆ ನಮ್ಮ ಪೊಲೀಸರು ಬಂದಾಗ ಅಂಜಿಕೊಳ್ಳದೆ ಅವರಿಂದ ಈ ಕಾರ್ಯಕ್ರಮದ ಬಗ್ಗೆ ಮಾಹಿತಿ ತಿಳಿದುಕೊಳ್ಳಿ. ನಿಮ್ಮ ಸಮಸ್ಯೆಗಳು ಸಣ್ಣ ದಿಂದ ದೊಡ್ಡದು ತನಕವೂ ಪೊಲೀಸರಿಗೆ ಮಾಹಿತಿ ನೀಡಿ ಎಂದರು.
ಕೂಡ್ಲಿಗಿ ಪೊಲೀಸ್ ಉಪ ವಿಭಾಗದ ಡಿವೈಎಸ್ಪಿ ಮಲ್ಲೇಶ ದೊಡ್ಡಮನಿ, ಹಗರಿಬೊಮ್ಮನಹಳ್ಳಿ ಸಿಪಿಐ ವಿಕಾಸ್ ಲಮಾಣಿ, ಕೂಡ್ಲಿಗಿ ಸಿಪಿಐ ಪ್ರಸಾದ ಚನ್ನಗಿರಿ ವೇದಿಕೆ ಮೇಲೆ ಇದ್ದರು.
ಹಗರಿಬೊಮ್ಮನಹಳ್ಳಿ ಸಿಪಿಐ ವಿಕಾಸ್ ಲಮಾಣಿ ಸ್ವಾಗತಿಸಿ, ತಂಬ್ರಹಳ್ಳಿ ಪಿಎಸ್ಐ ಗುರುಚಂದ್ರ ಯಾದವ್ ವಂದಿಸಿದರು. ಹಗರಿಬೊಮ್ಮನಹಳ್ಳಿ ಪಿಎಸ್ಐ ಬಸವರಾಜ ಅಡವಿಬಾವಿ ನಿರೂಪಿಸಿದರು.
ಕ್ರೈಂ ವಿಭಾಗದ ಪೇದೆಗಳಾದ ಎ.ಕಿರಣ್, ಧಶರಥ್, ಮಲ್ಲೇಶ್ ನಾಯ್ಕ್, ರಾಮಾಂಜನೇಯ, ಸಿದ್ದೇಶ್, ಮಹೇಶ್ ಸೇರಿದಂತೆ ಹಲವರು ವೇದಿಕೆಯ ಸಮನ್ವಯ ಮಾಡಿದರು.
- ಹುಳ್ಳಿಪ್ರಕಾಶ, ಸಂಪಾದಕರು, ಸುನಾಮಿನ್ಯೂಸ್, ಬೆಂಗಳೂರು.