* ಸುನಾಮಿನ್ಯೂಸ್, ಜೂನ್,21
ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಹೆಚ್. ಆರ್. ಗವಿಯಪ್ಪ ಅವರು ಶನಿವಾರ ಹೊಸಪೇಟೆ ನಗರದ ಜೆಸಿಸ್ ಪ್ರೌಢ ಶಾಲೆಯ ಸಭಾಂಗಣದಲ್ಲಿ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಮತ್ತು ಸರಕಾರಿ ಪ್ರೌಢಶಾಲೆಗಳು ಎದುರಿಸುತ್ತೀರುವ ಅಗತ್ಯವಾದ ಮೂಲಭೂತ ಸೌಕರ್ಯಗಳ ಸಮಸ್ಯೆಗಳ ಕುರಿತಂತೆ ಶಾಲೆಗಳ ಮುಖ್ಯೋಪಾಧ್ಯಾಯರೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಸರ್ಕಾರಿ ಶಾಲೆಗಳನ್ನು ಸಕಲ ಮೂಲಭೂತ ಸೌಕರ್ಯಗಳೊಂದಿಗೆ ಸಬಲೀಕರಣಗೊಳಿಸಿ, ಹೆಚ್ಚೆಚ್ಚು ಪಾಲಕರು ಮತ್ತು ಅವರ ಮಕ್ಕಳು ಸರ್ಕಾರಿ ಶಾಲೆಗಳತ್ತ ಬರುವಂತೆ ಆಕರ್ಷಣೆ ಮಾಡುವ ಉದ್ದೇಶದೊಂದಿಗೆ ನಗರದ
ಶಾಸಕರು ಅತ್ಯಂತ ವಿಶೇಷ ಕಾಳಜಿಯಿಂದಾಗಿ ಈ ಸಭೆ ಆಯೋಜನೆಗೊಂಡಿತ್ತು.
ವಿಜಯನಗರ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ
ಎಲ್ಲಾ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು ಈ ಸಭೆಯಲ್ಲಿ ಹಾಜರಿದ್ದರು. ಸರದಿಯಂತೆ ಒಬ್ಬೊಬ್ಬರಾಗಿ ಶಾಸಕರೊಂದಿಗೆ ಸಂವಾದ ನಡೆಸಿ ತಮ್ಮ ಶಾಲೆಗಳು ಎದುರಿಸುತ್ತೀರುವ ಮೂಲಭೂತ ಸೌಕರ್ಯಗಳ ಬಗ್ಗೆ ಹಾಗೂ ಈ ಕ್ಷಣಕ್ಕೆ ಆಗಬೇಕಾದ ಕೆಲಸಗಳ ಬಗ್ಗೆ ಮೌಖಿಕವಾಗಿ ಮತ್ತು ಲಿಖಿತವಾಗಿ ಶಾಸಕರಿಗೆ ತಿಳಿಸಿದರು.
ಅತ್ಯಂತ ಶಾಂತ ಚಿತ್ತರಾಗಿದ್ದು ಕೊಂಡು ಎಲ್ಲರ ಮಾತುಗಳನ್ನು, ಸಲಹೆಗಳನ್ನು ಶಾಸಕರು ಕೇಳಿಸಿಕೊಂಡರು. ಜೊತೆಗೆ ಅಗತ್ಯ ಮೂಲಭೂತ ಸೌಲಭ್ಯಗಳ ಬಗ್ಗೆಯೂ ನೋಟ್ ಮಾಡಿಕೊಂಡರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶೇಖರಪ್ಪ ಹೊರಪೇಟೆ, ಬಿ ಆರ್ ಸಿ ಗಳಾದ ಶಿವಕುಮಾರ್, ಪ್ರೌಢಶಾಲಾ ಮುಖ್ಯಗುರುಗಳ ಸಂಘದ ಅಧ್ಯಕ್ಷರಾದ ಶ್ರೀಮತಿ ಅಕ್ಕಮಹಾದೇವಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ತಾಲೂಕ ನಿರ್ದೇಶಕರಾದ ಕಡ್ಲಿ ವೀರಭದ್ರೇಶ್ವರ, ಪ್ರಾಥಮಿಕ ಶಾಲೆಗಳ ಮುಖ್ಯ ಗುರುಗಳ ಸಂಘದ ಜಿಲ್ಲಾ ಅಧ್ಯಕ್ಷರಾದ ಎಸ್. ಬಸವರಾಜ್, ಪ್ರಾಥಮಿಕ ಶಾಲೆಗಳ ಮುಖ್ಯ ಗುರುಗಳ ಸಂಘದ ತಾಲೂಕು ಅಧ್ಯಕ್ಷರಾದ ವರಪ್ರಸಾದ್ ಸೇರಿದಂತೆ ಹಲವರು ಭಾಗವಹಿಸಿದ್ದರು.
- ಹುಳ್ಳಿಪ್ರಕಾಶ, ಸಂಪಾದಕರು, ಸುನಾಮಿನ್ಯೂಸ್, ಬೆಂಗಳೂರು.