- ಸುನಾಮಿನ್ಯೂಸ್, ಜುಲೈ,7
ಹಿಂದೂ- ಮುಸ್ಲಿಂ ಭಾವೈಕ್ಯತೆಯ ಹಬ್ಬವೆಂದೆ ನಾಡಿನಾದ್ಯಂತ ಹೆಸರಾಗಿರುವ ಮೊಹರಂ ಹಬ್ಬವನ್ನು ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ಶಾಂತರೀತಿ ಯಿಂದ ಆಚರಣೆಗೊಂಡು, ಯಾವುದೇ ರೀತಿಯ ಸಣ್ಣ ಅಹಿತಕರ ಘಟನೆಗಳಿಲ್ಲದೆ ಸುರಕ್ಷಿತವಾಗಿ ಹಬ್ಬವೂ ಸಂಪನ್ನಗೊಂಡಿತು. ಆಗೇನೆ ಈ ಪಟ್ಟಣದ ಸುತ್ತಲಿನ ಗ್ರಾಮಗಳಾದ
ಬಲ್ಲಾಹುಣಸಿ, ಚಿಂತ್ರಪಳ್ಳಿ, ಕಿತ್ತನೂರು, ತಂಬ್ರಹಳ್ಳಿ, ಹಂಪಾಪಟ್ಟಣ, ಮಾಲವಿ, ಅಡವಿ ಅನಂದದೇವನಹಳ್ಳಿ, ಕಡಲಬಾಳು, ಹೊಸ ಆನಂದದೇವನಹಳ್ಳಿ, ಮರಬ್ಬಿಹಾಳುತಾಂಡ, ಉಪನಾಯಕನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿನ ಜನತೆ ಕೂಡ ಎರಡು ದಿನಗಳ ಕಾಲ ಸಡಗರ, ಸಂಭ್ರಮದೊಂದಿಗೆ ಮೊಹರಂ ಆಚರಿಸಿದರು.
ಖತಲ್ ರಾತ್ರಿಯ ದಿನವಾದ ಶನಿವಾರ ಸಕುಟುಂಬ ಸಮೇತರಾಗಿ ಮೊಹರಂ ಪೀರಲದೇವರನ್ನು ಕೂಡಿಸಿದ್ದ ಪೂಜಾ ಸ್ಥಳಕ್ಕೆ ಭೇಟಿ ನೀಡಿ ಸಕ್ಕರೆ ಹೊದಿಕೆ ಮಾಡಿಸಿ, ಹೂವಿನ ಹಾರ, ಲಾಡಿ, ಬೆಳ್ಳಿಯ ಕುದುರೆ, ಛತ್ರಿಗಳನ್ನು ಕೊಟ್ಟು ಹಾಗೂ ದೇವರ ಮುಂದೆ ತೆಗೆದಿರುವ ಅಲಾಯಿ ಕುಣಿಗೆ ಉಪ್ಪು ಹಾಕಿ ದೇವರಿಗೆ ತಮ್ಮ ಹರಕೆಯ ಭಕ್ತಿಯನ್ನು ಜನತೆ ಸಮರ್ಪಿಸಿದ್ದು ಎಲ್ಲಕಡೆಯು ಕಂಡು ಬಂತು.
ಹಲವು ಭಕ್ತರು ಅಲಾಯಿ ಕುಣಿಗಳಲ್ಲಿನ ನಿಗಿ,ನಿಗಿ ಬೆಂಕಿಯ ಕೆಂಡದ ಮೇಲೆ ಮೊಹರಂದೇವರನ್ನು ಹೊತ್ತುಕೊಂಡು ಸಾಗಿ ಬಂದ ದೃಶ್ಯವಂತೂ ಮೈ ಜುಂ ಎನಿಸುವಂತಿತ್ತು.
ಎಲ್ಲಡೆಯು ಜನರು ಸರದಿ ಸಾಲಿನಲ್ಲಿ ನಿಂತು ಮೊಹರಂ ದೇವರ ದರ್ಶನ ಪಡೆದುಕೊಂಡರು. ಮುಖ್ಯವಾಗಿ ಹಗರಿಬೊಮ್ಮನಹಳ್ಳಿ ಪಟ್ಟಣದ ರಾಮನಗರದ ತೇರು ಬೀದಿ ಹಾಗು ಬಸವೇಶ್ವರ ಬಜಾರ್ ನಲ್ಲಿನ ಮೊಹರಂ ದೇವರ ಪೂಜಾಸ್ಥಳದಲ್ಲಿ ಸಂಜೆ ನಾಲ್ಕು ಗಂಟೆಯಿಂದಲೇ ಭಕ್ತರ ದಟ್ಟಣೆ ಇತ್ತು.
ಆಗಸದಲ್ಲಿ ಸೂರ್ಯ ಸರಿದು ಕತ್ತಲು ಆವರಿಸುತ್ತಿದ್ದಂತೆಯೇ ಅಲಾಯಿ ಕುಣಿಗೆ ಅಗ್ನಿ ಸ್ಪರ್ಶ ಮಾಡುತ್ತಿದ್ದಂತೆಯೇ ಭಕ್ತರ ದಟ್ಟಣೆ ಅತೀ ಹೆಚ್ಚಾಯ್ತು. ಇತ್ತ ಪಟ್ಟಣದ ಹೊರವಲಯದ ಬಲ್ಲಾಹುಣಸಿ ಗ್ರಾಮದಲ್ಲೂ ಭಕ್ತರು ಸಾಕಷ್ಟು ಸಂಖ್ಯೆಯಲ್ಲಿ ನೆರೆದಿದ್ದರು. ಪ್ರತಿವರ್ಷ ಇಲ್ಲಿ ದೇವರ ಹೇಳಿಕೆ ಆಗುತ್ತೆ ಈ ಕಾರಣಕ್ಕೇನೆ ಬಲ್ಲಾಹುಣಸಿ ಮೊಹರಂ ಈ ಭಾಗದಲ್ಲಿ ಸಾಕಷ್ಟು ಫೇಮಸ್ ಆಗಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ.
ಹಬ್ಬದ ನಿಮಿತ್ತ ಬಹುತೇಕರ ಮನೆಗಳಲ್ಲಿ ಗೋಧಿ ಹಿಟ್ಟಿನ ರೋಟ್ಟಿಯಿಂದ ಮದಲಿ ಎನ್ನುವ ವಿಶೇಷ ಸಿಹಿ ಖಾದ್ಯ, ಚಾವಂಗಿಯನ್ನು ತಯಾರಿಸಿ ಸಕುಟುಂಬರಾಗಿ ಸವಿದರು. ಇನ್ನೂ ಹಲವರು ಕಂದುಗುರಿ ಹೆಸರಿನಲ್ಲಿ ಮಾಂಸಾಹಾರದ ಆಡುಗೆ ಮಾಡಿ ದೇವರಿಗೆ ನೈವೇದ್ಯ ಅರ್ಪಿಸಿದರು.
* ಶಾಂತಿಯುತ ಮೊಹರಂ ಮೆರವಣಿಗೆ:
ಮೊಹರಂ ಹಬ್ಬದ ಕೊನೆಯ ದಿನವಾದ ಭಾನುವಾರ ಹಗರಿಬೊಮ್ಮನಹಳ್ಳಿ ಪಟ್ಟಣ ಹಾಗು ವಿವಿಧ ಕಡೆಗಳಲ್ಲಿ ಪ್ರತಿಷ್ಠಾಪಿಸಿದ್ದ ಮೊಹರಂ ದೇವರ ಮೆರವಣಿಗೆಯೂ ಅತ್ಯಂತ ವಿಜೃಂಭಣೆಯಿಂದ ಸಾಗಿ, ಶಾಂತರೀತಿಯಲ್ಲಿ ಸಂಪನ್ನಗೊಂಡಿತು.
ಮಧ್ಯಾಹ್ನ ಮೂರು ಗಂಟೆಗೆ ವೇಳೆಗೆ ಸಿದ್ಧಗೊಂಡು ಆರಂಭವಾದ ಮೊಹರಂ ದೇವರ ಮೆರವಣಿಗೆ ಎಲ್ಲಾ ಧಾರ್ಮಿಕ, ವಿಧಿ,ವಿಧಾನಗಳೊಂದಿಗೆ ಮುಕ್ತಾಯಗೊಂಡಾಗ ರಾತ್ರಿ ಹತ್ತು ಗಂಟೆ ಆಯ್ತು. ಮುಜಾವರ್ ಹೊದಿಕೆ ನಂತರ ಸೇರಿದ್ದ ಭಕ್ತರಿಗೆಲ್ಲ ಚಾವಂಗಿ, ಮೊಸರನ್ನದ ಪ್ರಸಾದದ ವಿತರಣೆ ಮಾಡಿದರು. ನಂತರ ದೇವರನ್ನು ಇಟ್ಟ ಪೆಟ್ಟಿಗೆಗಳನ್ನು ಹೊತ್ತು ಕೊಂಡು ಪ್ರತಿಷ್ಠಾಪನೆ ಮಾಡಿದ್ದ ಪೂಜಾ ಸ್ಥಳಕ್ಕೆ ಹೋಗಿ ಇಟ್ಟ ಬಳಿಕ ಈ ವರ್ಷದ ಮೊಹರಂ ಹಬ್ಬವು ಸಂಪನ್ನಗೊಂಡಿತ್ತು.
ಪಟ್ಟಣದ ರಾಮನಗರದ ತೇರು ಬೀದಿಯ ಪಾದಗಟ್ಟೆ ಶ್ರೀ ಅಂಜನೇಯ ದೇವಸ್ಥಾನದ ಎದುರುಗಡೆ ಮೊಹರಂ ದೇವರ ಸ್ಥಳದಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಮೊಹರಂ ದೇವರನ್ನು ಹೊತ್ತ ಭವ್ಯವಾದ ಮೆರವಣಿಗೆಯೂ ರಾಮನಗರ ಸ್ಕೂಲ್ ಮೂಲಕ ಹಾದು ರೈತರ ಓಣಿ ಪ್ರವೇಶಿಸಿ ಅಲ್ಲಿಂದ ಶ್ರೀ ಮಾರುತಿ ಗರಡಿ ಮನೆ, ಶ್ರೀನರೆಗಲ್ ದುರುಗಮ್ಮದೇವಿ ದೇವಸ್ಥಾನದ ಮೂಲಕ ಗುರುಭವನದ ಬಳಿಯ ಅಂಜನೇಯ ದೇವಸ್ಥಾನದ ಬಳಿ ಯಿಂದ ಸಾಗಿ ರಾಮನಗರ ಸರ್ಕಲ್ ಮೂಲಕ ರೈಲ್ವೆ ಗೇಟ್ ಬಳಿಯ ಕಾಲೇಜ್ ರಸ್ತೆಯಲ್ಲಿನ ನಾಣಿಕೆರಿಯ ಶ್ರೀಈಶ್ವರ ದೇವಸ್ಥಾನದ ಬಳಿ ಸಂಪನ್ನಗೊಂಡಿತು.
ಈ ಮೆರವಣಿಗೆಯ ಉದ್ದಕ್ಕೂ ನೂರಾರು ಯುವಕರು ಜಮಾವಣೆಗೊಂಡು ಹಲಗೆ,ಡೊಳ್ಳು ಬಾರಿಸುತ್ತಾ, ತಾಸೀ ಬಡಿಯುತ್ತಾ ಮೆರವಣಿಗೆಯ ಮೆರಗನ್ನು ಹೆಚ್ಚಿಸಿದರು. ದೇವರು ಸಾಗಿ ಬಂದ ಮಾರ್ಗದ ಎರಡು ಬದಿಯಲ್ಲಿ ಜನರು ಸಾಕಷ್ಟು ಸಂಖ್ಯೆಯಲ್ಲಿ ನೆರೆದು ದೇವರ ದರ್ಶನ ಪಡೆದುಕೊಂಡರು. ಇನ್ನೂ ಹಲವರು ರಸ್ತೆಗೆ ನೀರು ಹಾಕಿ, ಮೊಹರಂ ದೇವರಿಗೆ ಅಡ್ಡಬಿದ್ದು ತಮ್ಮ ಭಕ್ತಿ ಸಮರ್ಪಿಸಿದರು.
ಕೂಡ್ಲಿಗಿ ಉಪವಿಭಾಗದ ಡಿವೈಎಸ್ಪಿ ಮಲ್ಲೇಶ್ ನಾಯ್ಕ್ ದೊಡ್ಡಮನಿ ಮಾರ್ಗದರ್ಶನದಲ್ಲಿ
ಹಗರಿಬೊಮ್ಮನಹಳ್ಳಿ ವಲಯದ ಸಿಪಿಐ ವಿಕಾಸ್ ಲಮಾಣಿ, ಪಿಎಸ್ಐ ಬಸವರಾಜ ಅಡವಿಬಾವಿ ನೇತೃತ್ವದಲ್ಲಿ ಮೊಹರಂ ದೇವರನ್ನು ಪ್ರತಿಷ್ಠಾಪನೆ ಮಾಡಿದ್ದ ಪೂಜಾಸ್ಥಳಗಳಲ್ಲಿ, ಮೆರವಣಿಗೆಗೆ ಸೂಕ್ತವಾದ ಪೋಲಿಸ್ ಬಂದೋಬಸ್ತ್ ವ್ಯವಸ್ಥೆ ಇತ್ತು.
- ಹುಳ್ಳಿಪ್ರಕಾಶ, ಸಂಪಾದಕರು, ಸುನಾಮಿನ್ಯೂಸ್, ಬೆಂಗಳೂರು.