- ಹುಳ್ಳಿಪ್ರಕಾಶ, ಸಂಪಾದಕರು
* ಸುನಾಮಿನ್ಯೂಸ್, ಹೊಸಪೇಟೆ, ಏ,11
ನಾನು ಸಂಸದನಾಗಲು, ನನ್ನ ಪತ್ನಿ ಶಾಸಕರಾಗುವುದರ ಹಿಂದೆ ಮುಸ್ಲಿಂ ಸಮುದಾಯದವರ ಬೆಂಬಲ, ಒಲವು ಹೆಚ್ಚಿನ ಮಟ್ಟದಲ್ಲಿ ಇತ್ತು ಎಂದು ಬಳ್ಳಾರಿ ಲೋಕಸಭಾ ಸದಸ್ಯರಾದ ಈ.ತುಕಾರಾಂ ಅಭಿಪ್ರಾಯಿಸಿದ್ದಾರೆ.
ಗುರುವಾರ ನಗರದಲ್ಲಿ ರಾಜ್ಯ ಹಜ್ ಸಮಿತಿ ಹಜ್ ಯಾತ್ರಿಗಳಿಗಾಗಿ ಹಮ್ಮಿಕೊಂಡಿದ್ದ ತರಬೇತಿ ಶಿಬಿರವನ್ನುದ್ದೇಶಿಸಿ ಸಂಸದರು ಮಾತನಾಡಿದರು.
ನಿಮ್ಮ ಹಿತಾಸಕ್ತಿಗೆ ಧಕ್ಕೆ ಆಗುವ ಕೆಲಸ ಮಾಡುವುದಿಲ್ಲ ಬದಲಿಗೆ ನಿಮ್ಮ ಪರವಾಗಿ ಸದಾ ನಾನು ಇರುತ್ತೇನೆ. ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆ ಮಂಡನೆ ಆದ ಸಮಯದಲ್ಲಿ ನಾನು ಕಾಯ್ದೆ ವಿರುದ್ಧವಾಗಿ ಮತಚಲಾಯಿಸಿದ್ದೇನೆ. ಸಂಸತ್ತಿನಲ್ಲಿ ನಾನು, ವಿಧಾನಸಭೆಯಲ್ಲಿ ನನ್ನ ಪತ್ನಿ ನಿಮ್ಮ ಪರವಾಗಿ ಸದಾ ಧ್ವನಿ ಎತ್ತುತ್ತೇವೆ ಎಂದು ಸಂಸದರು ಮುಸ್ಲಿಂ ಸಮುದಾಯವರಿಗೆ ಭರವಸೆ ಇತ್ತರು.
ಮುಸ್ಲಿಮರು ಕೆಲಸವನ್ನು ಶ್ರದ್ಧೆಯಿಂದ ಮಾಡುವ ಮೂಲಕ ಕಾಯಕಯೋಗಿಗಳಾಗಿದ್ದಾರೆ. ಸಂತರು, ಶರಣರು, ಪ್ರವಾದಿಗಳು, ಜ್ಞಾನಿಗಳು ಸೇರಿದಂತೆ ಮಹಾನ್ ದಾರ್ಶನಿಕರೆಲ್ಲರೂ ಮಾನವತೆಯ ಸಾರವನ್ನು ವಿಶ್ವಕ್ಕೆ ಸಾರಿದ್ದಾರೆ. ಸಮಾನತೆ, ಸಹೋದರತ್ವ, ಐಕ್ಯತೆಯ ಸಂದೇಶವನ್ನು ಅವರು ನೀಡಿದ್ದಾರೆ. ನಾವೆಲ್ಲರೂ ದಾರ್ಶನಿಕರು ಹಾಕಿರುವ ಮಾರ್ಗದಲ್ಲಿ ಹೆಜ್ಜೆಹಾಕೋಣ ಎಂದರು.
ಹಜ್ ಪವಿತ್ರವಾದ ಯಾತ್ರೆ ಆಗಿದೆ. ಮುಸ್ಲಿಮ್ ಸಮುದಾಯದಲ್ಲಿ ಇದೊಂದು ಮಹಾನ್ ಪುಣ್ಯದ ಕಾರ್ಯವಾಗಿದೆ. ತರಬೇತಿ ಶಿಬಿರದಲ್ಲಿ ಕಲಿಸಿಕೊಡುವುದನ್ನು ಚೆನ್ನಾಗಿ ಅರಿತುಕೊಂಡು ಹಜ್ ಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿ ಬನ್ನಿ ಎಂದು ಸಂಸದರು ಯಾತ್ರಿಗಳಿಗೆ ಶುಭ ಹಾರೈಸಿದರು.