- ಹುಳ್ಳಿಪ್ರಕಾಶ, ಸಂಪಾದಕರು
* ಸುನಾಮಿನ್ಯೂಸ್, ಮಾರ್ಚ್,30
ನಾಡಿನ ಜನತೆಗೆ ಯುಗಾದಿ ಎನ್ನುವುದು ಹೊಸವರ್ಷ. ಆದರೇ ಇವರಿಗೆ ಮಾತ್ರ ಉಗಾದಿ ವಿಶೇಷವಾದ ದಿನವಲ್ಲ ಬದಲಿಗೆ ಎಂದಿನಂತೆ ಕಾಮನ್ ಡೇ! ಇಡೀ ನಾಡು ಯುಗಾದಿಯ ಸಂಭ್ರಮದ ಆಚರಣೆಯಲ್ಲಿರುವಾಗ ಈ ಊರುಗಳ ಜನ ಯುಗಾದಿ ಹಬ್ಬವನ್ನೇ ಆಚರಿಸೊದಿಲ್ಲ ! ಹೊಸಬಟ್ಟೆ ಇರಲಿ, ಕನಿಷ್ಠ ಸ್ನಾನ ಕೂಡ ಯುಗಾದಿ ದಿನದಂದು ಮಾಡುವುದಿಲ್ಲ!
ಯಶ್ ಇದು ಅಶ್ಚರ್ಯವೂ ಹೌದು, ಈಗೂ ಉಂಟೇ! ಎನ್ನುವ ಉದ್ಘಾರವು ಕೂಡ. ನಮ್ಮ ದೇಶ ಸಾವಿರಾರು ಹಬ್ಬ,ಹರಿದಿನಗಳು, ಆಚರಣೆಗಳನ್ನು ಕಂಡಿರುವಂತೆ ಯುಗಾದಿ ಹಬ್ಬವನ್ನೂ ಆಚರಣೆ ಮಾಡದಂತಹ ಸೇರಿದಂತೆ ಇಂತಹ ನೂರಾರು ವಿಚಿತ್ರ, ವೈಚಿತ್ರವಾದ ಪರಂಪರೆ, ಸಂಪ್ರಾದಾಯಗಳ ಆಚರಣೆಯನ್ನು ತನ್ನ ಮಡಿಲಲ್ಲಿಟ್ಟುಕೊಂಡಿದೆ.
ಇನ್ನೂ ನೇರ ಸುದ್ದಿಗೆ ಬರೋದಾದರೇ, ವಿಜಯನಗರ ಜಿಲ್ಲೆಯ ಕೇಂದ್ರ ಸ್ಥಾನವೂ ಆಗಿರುವ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ, ಹಗರಿಬೊಮ್ಮನಹಳ್ಳಿ ಪಟ್ಟಣದ ರಾಮನಗರದ ರೈತರ ಓಣಿ, ಈ ತಾಲೂಕಿನ ನಾರಾಯಣದೇವರಕೆರೆ ಲಡಕನಬಾವಿ), ಲೋಕಪ್ಪನಹೊಲ ಈ ಊರಿನಲ್ಲಿರುವ ಹಲವು ಕುಟುಂಬಗಳು ಯುಗಾದಿ ಆಚರಣೆಯಿಂದ ಶತ,ಶತಮಾನಗಳಿಂದಲೂ ದೂರವೇ ಉಳಿದುಕೊಂಡು ಬರುತ್ತೀವೆ!
ತೀರಾ ಇತ್ತಿಚಿನವರೆಗೂ ಅಂದರೇ ಸೋಷಿಯಲ್ ಮಿಡಿಯಾದ ಕಾಲ ಆರಂಭವಾಗುವವರೆಗೂ ಅನ್ನೊಣ, ಯುಗಾದಿ ದಿನ ಸ್ನಾನ ಕೂಡ ಈ ಮನೆಗಳಲ್ಲಿ ನಿಷೇಧವಾಗಿತ್ತು! ಸಿಹಿ ತಿನಿಸು, ಹೊಸ ಬಟ್ಟೆ ಸುತರಾಂ ಇಲ್ಲ! ಇನ್ನೂ ಇಂತಹ ಮನೆಗಳಿಗೆ ಸೊಸೆಯಾಗಿ ಬಂದವರು ಯುಗಾದಿ ಆಚರಣೆ ಮಾಡಿ, ಬೇವು-ಬೆಲ್ಲ ತಿಂದುಣ್ಣಲು ತವರುಮನೆಯತ್ತ ಪಾದ ಬೆಳೆಸುವುದು ಅನಿವಾರ್ಯವಾಗಿತ್ತು.
- ಪ್ರಬಲ ಕಾರಣಗಳಿಲ್ಲ:
——– ಇಡೀ ನಾಡು ಹೊಸ ಸಂವತ್ಸರದ ಆಗಮನದ ಸಂಭ್ರಮಾಚರಣೆಯಲ್ಲಿರುವಾಗ ಯುಗಾದಿಯನ್ನೇ ಆಚರಿಸದೆ ಹಬ್ಬ ದಿಂದ ದೂರ ಉಳಿಯಲು ಇವರಿಗೆ ಪ್ರಬಲವಾದ ಕಾರಣಗಳೇ ಇಲ್ಲ. ಇನ್ನೂ ಮರಿಯಮ್ಮನಹಳ್ಳಿ, ರಾಮನಗರದ ರೈತ ಓಣಿ, ಲಡಕನಬಾವಿ, ಲೋಕಪ್ಪನಹೊಲ ಊರುಗಳಲ್ಲಿ ಹಬ್ಬ ಆಚರಿಸದಿರುವವರನ್ನು ವಿಚಾರಿಸಿದಾಗ ಆ ದಿನ ನಮ್ಮ ಮನೆಗಳಲ್ಲಿ ಕೆಡುಕು ಆಗಿತ್ತಂತೆ ಅದಕ್ಕೆ ನಮ್ಮ ಹಿರಿಯರು ಹಬ್ಬ ಆಚರಿಸಲಿಲ್ಲ ಎನ್ನುತ್ತಾರೆ
ನಾಣಿಕೇರಿ ಯುವ ಮುಖಂಡರಾದ ಡ್ರೈವರ್ ಚಂದ್ರು, ಪ್ಲಂಬರ್ ಮಾರುತಿ, ಕುದುರಿ ಪ್ರಕಾಶ, ರಾಚಣ್ಣನವರ ರಾಘು, ಗುರುಭವನ ವಿರೇಶ.
ನಮ್ಮ ನಾಣಿಕೇರಿಯ ಹಲವು ಕುಟುಂಬಗಳಲ್ಲಿ ಹಿಂದಿನ ಕಾಲ ದಿಂದಲೂ ಯಜಮಾನ್ರು ಹಬ್ಬ ಮಾಡಿಲ್ಲ ಅದಕ್ಕೆ ಈಗಲೂ ಕೂಡ ಉಗಾದಿ ಹಬ್ಬ ಆಚರಿಸದ ಸಾಕಷ್ಟು ಕುಟುಂಬಗಳಿವೆ ಎನ್ನುತ್ತಾರೆ ನಾಣಿಕೇರಿ ಯುವ ಮುಖಂಡರಾದ ಬಾರಿಕರ ಸಂದೀಪ, ಬಾರಿಕರಕೋಟಿ, ಸರ್ದಾರ ಸತೀಶ, ರಾಚಣ್ಣನವರ ಸಂತು, ನೂರಿ.
ಇದರ ನಡುವೆ ನಮ್ಮ ಕಾಲಕ್ಕೆ ಹಬ್ಬ ಮಾಡಲಿಲ್ಲ. ಆದರೇ ಮನೆಗೆ ಸೊಸೆ ಬಂದ ಮೇಲೆ ಅವರು ನಮ್ಮ ಮಾತು ಕೇಳಲಿಲ್ಲ ಹಬ್ಬ ಮಾಡಲು ಶುರು ಮಾಡಿದ್ದೇವೆ ಎನ್ನುವ ಕುಟುಂಬಗಳು ಇವೆ ಎನ್ನುತ್ತಾರೆ ತಾಲೂಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ನಿರ್ದೇಶಕರು, ನಾಣಿಕೇರಿಯವರೇ ಆದ ಉಪ್ಪಾರ ಪ್ರಕಾಶ, ಮಾಜಿ ಗ್ರಾಪಂ ಅಧ್ಯಕ್ಷರಾದ ಗುಂಡ್ರು ಹನುಮಂತಪ್ಪ.
ಕಾಲ ಬದಲಾಗಿದೆ ಮಕ್ಕಳು ಓದಿಕೊಂಡಿವೆ, ನೌಕರಿಗೆ ಹೋಗ್ತಾರ ದೇವರಿಗೆ ಎಡೆ ಇಡಲ್ಲ, ಪೂಜೆಗೀಜೆ ಮಾಡಲ್ಲ ಆದರೇ ಮನೆಯಲ್ಲಿ ಬೇವು-ಬೆಲ್ಲ, ಶ್ಯಾವಿಗೆ ಮಾಡಿಕೊಂಡು ಊಟಮಾಡ್ತೀವಿ ಎನ್ನುವರು ಇತ್ತಿಚಿಗೆ ಹೆಚ್ಚಾಗಿದ್ದಾರೆ ಎನ್ನುತ್ತಾರೆ ನಾಣಿಕೇರಿ ಶ್ರೀನರೆಗಲ್ ದುರುಗಮ್ಮ ದೇವಿ ದೇವಸ್ಥಾನ ಸಮಿತಿ ಅಧ್ಯಕ್ಷರಾದ ಚಿಗರಿ ಮಾರುತಿ, ಖಜಾಂಚಿ ಹನುಮೇಶ, ಸದಸ್ಯ ಹುಗ್ಗಿಹುಲುಗಪ್ಪ.
ಯುಗಾದಿ ಆಚರಿಸದ ಬಗ್ಗೆ ಯಾವ ಕೋನದಲ್ಲೂ ಕೂಡ ಪ್ರಬಲವಾದ ಕಾರಣಗಳಿಲ್ಲ. ಆದರೂ ಶತ,ಶತಮಾನಗಳಿಂದಲೂ ಯುಗಾದಿಯನ್ನು ಆಚರಣೆ ಮಾಡದೇಯೇ ಹಿರಿಯರ ಹಾದಿಯಲ್ಲಿ ಸಾಗುವ ಕುಟುಂಬಗಳು ಇನ್ನೂ ಕೂಡ ಇಂತಹ ಸೋಷಿಯಲ್ ಮಿಡಿಯಾದ ಯುಗದಲ್ಲೂ ಇರುವುದು ಸೋಜಿಗವೇ ಸರಿ ಎನ್ನುತ್ತಾರೆ ಪುರಸಭಾ ಸದಸ್ಯರು, ನಾಣಿಕೇರಿ ದೈವಸ್ಥರ ಪ್ರಮುಖರಾದ ಜೋಗಿ ಹನುಮಂತಪ್ಪ, ಮುಖಂಡರಾದ ಮಡಿವಾಳರ ಪ್ರಕಾಶ.
- ನಾಣಿಕೇರಪ್ಪನ ತೇರು:
———- ಇನ್ನೂ ಯುಗಾದಿ ಆಚರಿಸದಿರುವ ಬಗ್ಗೆ ಕುರಿತಂತೆ ನಾಣಿಕೇರಿಯ ದೈವಸ್ಥರ ಪ್ರಮುಖರು, ರಾಮನಗರ ರೈತರ ಓಣಿಯ ಸ್ವಾತಂತ್ರ್ಯ ಹೋರಾಟಗಾರರಾದ ಬಾರಿಕರ ಯಲ್ಲಪ್ಪರ ಪುತ್ರರು ಆದ ಬಾರಿಕರ ಬಾಪೂಜಿ, ನಾಣಿಕೇರಿ ದೈವಸ್ಥರ ಮುಖಂಡರಾದ ಅರಸಿಕೇರಿ ಹನುಮಂತಪ್ಪ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು, ನಾಣಿಕೇರಿ ದೈವಸ್ಥರ ಪ್ರಮುಖರಾದ ದಾದಮ್ಮನವರ್ ಬಸವರಾಜ ಅವರುಗಳು ‘ ಸುನಾಮಿ ನ್ಯೂಸ್’ ಜೊತೆಗೆ ಮಾತನಾಡಿ, ನಾವು ಕೂಡ ಹಬ್ಬವನ್ನು ಆಚರಣೆ ಮಾಡೋದಿಲ್ಲ. ಇದಕ್ಕೆ ಪ್ರಬಲ ಕಾರಣಗಳು ನನಗೆ ಗೊತ್ತಿಲ್ಲ. ನಮ್ಮ ಅಜ್ಜ, ಮುತ್ತಜ್ಜನ ಕಾಲ ದಿಂದಲೂ ನಮ್ಮ ಮನೆಯಲ್ಲಿ ಹಬ್ಬ ಮಾಡಿಲ್ಲ, ಅದಕ್ಕೆ ನಾವು ಮಾಡಲ್ಲ ಅಂತಾ ನಮ್ಮಪ್ಪ, ನಮ್ಮವ್ವ ಹೇಳ್ತಾಯಿದ್ರು, ಈಗ ನಾವು ಅದನ್ನು ಮುಂದುವರೆಸಿದ್ದೇವೆ ಎನ್ನುತ್ತಾರೆ.
ಇನ್ನೂ ನಮಗೆ ಗೊತ್ತಿರುವಂತೆ ಈಗಿನ ಮರಿಯಮ್ಮನಹಳ್ಳಿ, ಹಗರಿಬೊಮ್ಮನಹಳ್ಳಿ ಪಟ್ಟಣದ ಮುಕ್ಕಾಲು ಭಾಗ, ಲಡಕನಬಾವಿ, ಲೋಕಪ್ಪನಹೊಲ ನಾವೆಲ್ಲರೂ ತುಂಗಾಭದ್ರ ಜಲಾಶಯದಲ್ಲಿ ಮುಳುಗಡೆ ಗೊಂಡಿರುವ ಐತಿಹಾಸಿಕ ನಗರವಾಗಿದ್ದ ನಾರಾಯಣ ದೇವರಕೆರೆಗೆ ಸೇರಿದವರು. ಡ್ಯಾಂಗೆ ಅಂತಿಮ ಕ್ರಸ್ಟ್ ಗೇಟ್ ಅಳವಡಿಸಿದ ನಂತರ ನಮ್ಮೂರು ಸಂಪೂರ್ಣ ಮುಳುಗಡೆ ಆಯ್ತು. ಮುಳುಗಡೆ ಜನರಿಗೆ ಮೇಲೆ ಪ್ರಸ್ತಾಪಿಸಿದ ಊರುಗಳಲ್ಲಿ ಪುನರ್ ವಸತಿ ಕಲ್ಪಿಸಲಾಯ್ತು.
ಈ ಹೊಸ ಊರುಗಳಲ್ಲಿ ನಾವು ಬದುಕು ರೂಪಿಸಿಕೊಂಡಿದ್ದೇವೆ. ಈಗಲೂ ಈ ಊರುಗಳು ಹಳೇ ನಾಣಿಕೇರಿಯವರೇಂದೆ ನಾವುಗಳು ಗುರಿತಿಸಿಕೊಳ್ಳುತ್ತೇವೆ. ಒಂದೇ ಊರಿನವರೆಂಬ ಅಭಿಮಾನ ಈಗಲೂ ಇದೆ. ಪ್ರಸ್ತುತ ಕಾಲದಲ್ಲೂ ನಾವೆಲ್ಲ ಅಣ್ಣ,ತಮ್ಮಂದಿರಂತೆ ಬದುಕುತ್ತೀದ್ದೇವೆ. ಹಳೇ ನಾಣಿಕೇರಿಯ ಆಚರಣೆಗಳನ್ನೇ ಮುಂದುವರೆಸಿ ಕೊಂಡು ಬರುತ್ತೀದ್ದೇವೆ.
ಯುಗಾದಿ ಪಾಡ್ಯದ ನಂತರ ಬರುವ ನವಮಿಗೆ ನಮ್ಮೂರು ನಾರಾಯಣದೇವರಕೆರೆಯಲ್ಲಿ ಜೋಡಿ ರಥೋತ್ಸವಗಳು ಜರುಗುತ್ತಿದ್ದವಂತೆ. ಆ ಕಾಲದಲ್ಲಿ ಈಗಿನ ಮೈಲಾರ, ಕೊಟ್ಟೂರು, ಹುಲಿಗಿ ಜಾತ್ರೆಗೆ ಸೇರುವಂತೆ ಜನರು ನಮ್ಮೂರಿನ ಜಾತ್ರೆಯಲ್ಲಿ ಸಂಗಮಗೊಳ್ಳುತ್ತಿದ್ದರಂತೆ. ಜಾತ್ರೆಯನ್ನು ವಿಜೃಂಭಣೆಯಿಂದ ಮಾಡುವ ಸಲುವಾಗಿ ಯುಗಾದಿಯನ್ನು ಜನರು ಆಚರಣೆ ಮಾಡದೇ ಇರಬಹುದು. ಏಕೆಂದರೆ ಎಂಟೇ ದಿನದಲ್ಲಿ ಯುಗಾದಿ ಮತ್ತು ಜೋಡಿ ರಥೋತ್ಸವ ಎರಡನ್ನು ಮಾಡಲು ಆರ್ಥಿಕ ಹೊರೆಯು ಆಗುವುದರಿಂದ ನಮ್ಮ ಹಿರಿಯರು ಯುಗಾದಿಯನ್ನು ಆಚರಣೆಯನ್ನು ಕೈಬಿಟ್ಟಿರ ಬಹುದೆಂದು ಬಾರಿಕರ ಬಾಪೂಜಿ, ಅರಸಿಕೇರಿ ಹನುಂತಪ್ಪ, ದಾದಮ್ಮನವರ ಬಸವರಾಜ ಅಭಿಪ್ರಾಯಿಸಿದ್ದಾರೆ.
- ಹುಳ್ಳಿಪ್ರಕಾಶ, ಸಂಪಾದಕರು.