- ಹುಳ್ಳಿಪ್ರಕಾಶ, ಸಂಪಾದಕರು
* ಸುನಾಮಿನ್ಯೂಸ್, ಏಪ್ರಿಲ್, 2
ಹಗರಿಬೊಮ್ಮನಹಳ್ಳಿ ಪಟ್ಟಣದ ರಾಮನಗರ ಬಸ್ ಸ್ಟ್ಯಾಂಡ್ ಬಳಿ ವಿಶಾಲವಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತದಲ್ಲಿ ಸುಮಾರು 50 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಸಂವಿಧಾನಶಿಲ್ಪಿ ಅವರ ಭವ್ಯ ಪುತ್ಥಳಿ, ಚೆಂದದ ಉದ್ಯಾನವನ್ನು ನಿರ್ಮಾಣ ಮಾಡಲಾಗುವುದು ಎಂದು ಕ್ಷೇತ್ರದ ಶಾಸಕರಾದ ಕೆ.ನೇಮಿರಾಜನಾಯ್ಕ್ ಹೇಳಿದ್ದಾರೆ.
ಬುಧವಾರ ಮಧ್ಯಾಹ್ನ ಪಟ್ಟಣದ ತಾಪಂ ಮಹಾತ್ಮಗಾಂಧಿ ಸಭಾಂಗಣದಲ್ಲಿ ಜರುಗಿದ ಡಾ.ಬಿಆರ್.ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಂ ಜನ್ಮ ದಿನಾಚರಣೆಯ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಶಾಸಕರು ಮಾತನಾಡಿದರು.
ನಾನು ಸುಳ್ಳು, ಪೊಳ್ಳು ಭರವಸೆ ನೀಡುವಂತಹ ರಾಜಕಾರಣಿಯಲ್ಲ, ಮತ ಪಡೆಯಲು ಗಿಮಿಕ್ ಮಾಡಲ್ಲ. ಬದಲಿಗೆ ಜನರಪರವಾಗಿದ್ದು, ಜನ ಮೆಚ್ಚುವಂತಹ ಕೆಲಸ ಮಾಡಿ ತೋರಿಸುವಂತಹ ಜನಪ್ರತಿನಿಧಿ. ಈ ಸಲದ ಜಯಂತಿ ದಿನವೇ ಅಂಬೇಡ್ಕರ ರವರ ನೂತನ ಪುತ್ಥಳಿ ನಿರ್ಮಾಣಕ್ಕೆ ಭೂಮಿ ಪೂಜೆ ನೇರವೇರಿಸುತ್ತೇನೆ ಎಂದು ಸಭೆಯ ಮೂಲಕ ದಲಿತ ಸಮುದಾಯ ಹಾಗೂ ಅಂಬೇಡ್ಕರ್ ವಾದಿಗಳಿಗೆ ಶಾಸಕ ನೇಮಿರಾಜನಾಯ್ಕ್ ಖಚಿತ ಭರವಸೆ ಕೊಟ್ಟರು.
ಹರ್ಷೋದ್ಘಾರ:
ಜಯಂತಿ ದಿನವೇ 50 ಲಕ್ಷರೂ ವೆಚ್ಚದಲ್ಲಿ ಪುತ್ಥಳಿ ನಿರ್ಮಾಣಕ್ಕೆ ಭೂಮಿಪೂಜೆ ನೇರವೇರಿಸುವ ವಿಚಾರವನ್ನು ಶಾಸಕರು ಪ್ರಕಟಿಸುತ್ತಿದ್ದಂತೆಯೇ ಸಭೆಯಲ್ಲಿ ಹಾಜರಿದ್ದ ವಿವಿಧ ದಲಿತ ಸಂಘಟನೆಗಳ ಕಾರ್ಯಕರ್ತರು, ಮುಖಂಡರುಗಳು ಜೋರಾಗಿ ಚಪ್ಪಾಳೆ ತಟ್ಟಿ, ಮೇಜು ಕುಟ್ಟಿ ತಮ್ಮ ಹರ್ಷೋದ್ಘಾರವನ್ನು ವ್ಯಕ್ತ ಪಡಿಸಿದರು.
ಇದಕ್ಕೂ ಮುನ್ನ ಸಭೆಯಲ್ಲಿ ಮಾತನಾಡಿದ
ಡಾ.ಬಿ.ಆರ್.ಅಂಬೇಡ್ಕರ್ ಸಂಘದ ತಾಲೂಕ ಅಧ್ಯಕ್ಷ ಗದ್ದಿಕೇರಿ ದೊಡ್ಡಬಸಪ್ಪ, ಅಂಬೇಡ್ಕರ್ ಪುತ್ಥಳಿ ನಿರ್ಮಾಣದ ಕುರಿತಂತೆ ಪ್ರಸ್ತಾಪಿಸಿ, ಅದಷ್ಟು ಬೇಗ ಪುತ್ಥಳಿ ನಿರ್ಮಿಸಿ ಕೋಡುವಂತೆ ಶಾಸಕರಿಗೆ ಮನವಿ ಮಾಡಿದರು.
ಪುರಸಭೆ ಅಧ್ಯಕ್ಷ ಮರಿರಾಮಣ್ಣ, ತಹಶಿಲ್ದಾರ ಕವಿತಾ, ತಾಪಂ ಇಓ ಪರಮೇಶ್ವರಪ್ಪ, ಸಿಪಿಐ ವಿಕಾಸ್ ಲಮಾಣಿ, ತಾಲೂಕ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸೊನ್ನದ್ ಗುರುಬಸವರಾಜ, ಮುಖಂಡರಾದ ಬಾದಾಮಿ ಮೃತ್ಯುಂಜಯ, ಕನ್ನಿಹಳ್ಳಿ ಚಂದ್ರಶೇಖರ, ಚಿಂತ್ರಪಳ್ಳಿ ದೇವೆಂದ್ರ, ಟಿ.ವೆಂಕೋಬಪ್ಪ,
ದಲಿತ ಮುಖಂಡರಾದ ಅಲಬೂರು ಮರಿಯಪ್ಪ, ಯಡ್ರಮ್ಮನಹಳ್ಳಿ ಮರಿಯಪ್ಪ, ಮಾದೂರು ಮಹೇಶ, ಕಾಳಿ ಬಸವರಾಜ, ಹೆಗ್ಡಾಳ ಪರುಶುರಾಮ, ಆನಂದಳ್ಳಿ ಪ್ರಭು, ಪೂಜಾರಿ ಸಿದ್ದಪ್ಪ ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.
ತಾಲೂಕ ಸಮಾಜ ಕಲ್ಯಾಣಾಧಿಕಾರಿ ಆನಂದ್ ಡೊಳ್ಳಿನ್ ಸ್ವಾಗತಿಸಿ, ಹಾಸ್ಟೇಲ್ ವಾರ್ಡನ್ ನಾಗರಾಜ ವಂದಿಸಿದರು.