- ಹುಳ್ಳಿಪ್ರಕಾಶ, ಸಂಪಾದಕರು
* ಸುನಾಮಿನ್ಯೂಸ್, ಏಪ್ರಿಲ್,3
ಗುರುವಾರ ಬೆಳಗಿನ ಜಾವ ಹಗರಿಬೊಮ್ಮನಹಳ್ಳಿ ಪಟ್ಟಣ ಸಹಿತ ತಾಲೂಕಿನ ವಿವಿಧ ಊರುಗಳಲ್ಲಿ ಗುಡುಗು, ಸಿಡಿಲನೊಂದಿಗೆ ಪೂರ್ವ ಮುಂಗಾರು ಮಳೆ ತೀವ್ರವಾಗಿಯೇ ಅಬ್ಬರಿಸಿತು. ಸರಿಸುಮಾರು ಒಂದು ಗಂಟೆ ಕಾಲ ಎಡಬಿಡದೆ ಸುರಿದ ಮಳೆಯಿಂದಾಗಿ ಚರಂಡಿಗಳು ಉಕ್ಕಿ ಹರಿದವು, ರಸ್ತೆಗಳು ಜಲಾವೃತಗೊಂಡವು.
ಒಂದು ಗಂಟೆ ಮಳೆಯಿಂದಾಗಿ ಇದ್ದಕ್ಕಿದ್ದಂತೆ ವಾತಾವರಣ ಚಳಿಗಾಲದಷ್ಟೆ ತಂಪಾಯ್ತು. ಬೆಳಗಿನಿಂದ ಬಿಸಿಲಿನ ಝಳ ದಿಂದಾಗಿ ಪಟ್ಟಣದ ಹಾಗೂ ತಾಲೂಕಿನ ಜನರು ತತ್ತರಿಸಿದ್ದರು. ಪೂರ್ವ ಮುಂಗಾರಿನ ಅಬ್ಬರ ತಂಪೆರೆದಿದ್ದರಿಂದ ಜನರು ನಿಟ್ಟುಸಿರು ಬಿಟ್ಟರು.
ಹದವಾದ ಮಳೆ:
————- ಗುರುವಾರ ಬೆಳಗಿನ ಜಾವ ಒಳ್ಳೆಯ ಹದಾವಾದ ಮಳೆ ಸುರಿದಿದೆ. ಮುಂಗಾರು ಬಿತ್ತನೆಗೆ ಹೊಲ,ಗದ್ದೆಗಳನ್ನು ಮಾಗಿ ಮಾಡಿಟ್ಟುಕೊಳ್ಳಲು ಬೇಕಾದ ಹದಾವಾದ ಮಳೆ ತಾಲೂಕಿನ ಬಹುತೇಕ ಕಡೆಗೆ ಆಗಿದೆ. ಹೊಲಗಳ ಬದುವಿನಲ್ಲಿ, ಹಳ್ಳ,ಕೊಳ್ಳಗಳ ತಗ್ಗು, ಗುಂಡಿಗಳಲ್ಲಿ ಮಳೆ ನೀರು ವ್ಯಾಪಕವಾಗಿದೆ ಎನ್ನುವ ಅಭಿಪ್ರಾಯಗಳು ತಾಲೂಕಿನಾದ್ಯಂತ ಅನ್ನದಾತರಿಂದ ವ್ಯಕ್ತವಾಗಿವೆ.
ಏಪ್ರಿಲ್ ಹದಿಮೂರನೇ ತಾರೀಖಿನಿಂದ ಅಶ್ವಿನಿ ಮಳೆ ಶರುವಾಗುತ್ತೆ. ರೈತರ ವಾಡಿಕೆಯಂತೆ ಇದುವೇ ಈ ವರ್ಷದ ಹೊಸ ಮಳೆ ಆಗಿದೆ.