- ಹುಳ್ಳಿಪ್ರಕಾಶ, ಸಂಪಾದಕರು
* ಸುನಾಮಿನ್ಯೂಸ್, ಏಪ್ರಿಲ್,4
ಹಗರಿಬೊಮ್ಮನಹಳ್ಳಿ ಪಟ್ಟಣದ ತಾಪಂ ಸಭಾಂಗಣದಲ್ಲಿ ಜರುಗಿದ
ಸಂವಿಧಾನಶಿಲ್ಪಿ ಡಾ.ಬಿಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಅವರ ಜಯಂತಿ ಆಚರಣೆಯ ಪೂರ್ವಭಾವಿ ಸಭೆಗೆ ಇಲ್ಲಿನ ಪುರಸಭೆಯ ಮುಖ್ಯಾಧಿಕಾರಿ ಬದಲಿಗೆ ಸಭೆಗೆ ಬಂದಿದ್ದ ಸಮುದಾಯ ಅಧಿಕಾರಿ ಬಸವರಾಜ ಅವರನ್ನು ಕ್ಷೇತ್ರದ ಶಾಸಕರಾದ ಕೆ.ನೇಮಿರಾಜನಾಯ್ಕ್ ಸಭೆಯಿಂದ ಹೊರ ಕಳುಹಿಸಿದ ಘಟನೆ ಜರುಗಿತು.
ಪೂರ್ವಭಾವಿ ಸಭೆಯಲ್ಲಿ ಇಲಾಖೆವಾರು ಅಧಿಕಾರಿಗಳು ಹಾಜರಾಗದೆ, ಸಹಾಯಕರನ್ನು ಕಳುಹಿಸಿದ್ದಾರೆಂದು ಸಭೆಯಲ್ಲಿ ಹಾಜರಿದ್ದ ದಲಿತ ಮುಖಂಡರುಗಳು ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿದ್ದ ಶಾಸಕರ ಗಮನಕ್ಕೆ ತಂದರು. ಆಗ ಪುರಸಭೆ ಮುಖ್ಯಾಧಿಕಾರಿ ಬಾರದೆ ಸಹಾಯಕರನ್ನು ಕಳುಹಿಸಿರುವುದು ಗಮನಕ್ಕೆ ಬರುತ್ತಲೇ ಶಾಸಕರು ತೀವ್ರ ಸಿಡಿಮಿಡಿಗೊಂಡರು.
ಅಲ್ರೀ ಅಂಬೇಡ್ಕರ್ ಜಯಂತಿ ಆಚರಣೆ ಎಂದ್ರೇ ಹುಡುಗಾಟ ಅನ್ನಕೊಂಡಿರೇನು ಎಂದು ಜೋರಾಗಿ ಗದರಿ, ಅವ್ರೂ ಹೇಳಿಬಿಟ್ರು ನೀವು ಸಭೆಗೆ ಬಂದಬಿಟ್ರೇನೋ, ಹೋಗ್ರಿ ನಿಮ್ಮ ಚೀಫ್ ಆಫೀಸರನ್ನು ಕಳುಹಿಸಿಹೋಗಿ ಎಂದು ಸಭೆಯಿಂದ ಹೊರಹೋಗುವಂತೆ ಬಹಳ ಸಿಟ್ಟಿನಿಂದಲೇ ಬಸವರಾಜಪ್ಪಗೆ ಹೇಳಿದರು. ತಡಮಾಡದೇನೆ ಪುರಸಭೆಯ ಕಮ್ಯೂನಿಟಿ ಆಫೀಸರ್ ಸಭೆಯಿಂದ ಹೊರ ನಡೆದರು.
ಸ್ವಲ್ಪ ಸಮಯದ ಬಳಿಕ ಸಭೆಗೆ ಮುನ್ಸಿಪಾಲ್ಟಿ ಚೀಫ್ ಆಫೀಸರ್ ಪ್ರಭಾಕರಪಾಟೀಲರು ಆಗಮಿಸಿದರು. ಏನ್ರೀ ಪಾಟೀಲ್, ಸಂವಿಧಾನಶಿಲ್ಪಿ ಡಾ.ಬಿಆರ್. ಅಂಬೇಡ್ಕರ್ ಅವರ ಜಯಂತಿ ಆಚರಣೆಯ ಪೂರ್ವಭಾವಿ ಸಭೆ ಇದ್ದಾಗ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರೇ ಖುದ್ದು ಹಾಜರಾಗುತ್ತಾರೆ ಅಂತಹದ್ರಲ್ಲಿ ನೀವು ತಾಲೂಕ ಮಟ್ಟದಲ್ಲಿ ಜವಾಬ್ದಾರಿ ಸ್ಥಾನದಲ್ಲಿದ್ದು ಸಭೆಯಿಂದ ದೂರ ಉಳಿದು ಏನ್ ತಮಾಷೆ ಮಾಡ್ತೀರಾ ಎಂದು ಶಾಸಕರು ತೀವ್ರ ತರಾಟೆಗೆ ತೆಗೆದುಕೊಂಡ್ರು.
ನೋಡ್ರೀ,ಮಹಾನೀಯರ ಜಯಂತಿ ಬಗ್ಗೆ ನಿರ್ಲಕ್ಷ್ಯ ಹಾಗೂ ಅಸಡ್ಡೆತನ ತೋರಿರುವ ನಿಮ್ಮ ವರ್ತನೆ ಕ್ಷಮೆಗೆ ಆರ್ಹವಲ್ಲ, ನಿಮ್ಮ ಮೇಲೆ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡುವುದಾಗಿ ಶಾಸಕರು ಉಗ್ರಸ್ವರೂಪ ತಾಳಿದರು. ಕಾರ್ಯ ನಿಮಿತ್ತ ಪುರಸಭೆಯ ಅಧಿಕಾರಿಯೊಬ್ಬರನ್ನು ನಿಯೋಜಿಸಿ ಸಭೆಗೆ ಕಳುಹಿಸಿದ್ದೆ, ಮುಂದೆ ಈತರಹ ಮಾಡುವುದಿಲ್ಲ ಎಂದು ಪಾಟೀಲ್ ಕೇಳಿಕೊಂಡಾಗ ಸರಿ, ಜಯಂತಿ ಆಚರಣೆಯ ಜವಾಬ್ದಾರಿಯಲ್ಲಿ ಏನಾದರೂ ಲೋಪ ಎಸಗಿದ್ದು ಕಂಡು ಬಂದರೇ ಶಿಸ್ತು ಕ್ರಮ ಖಚಿತ ಎಂದು ಶಾಸಕರು ಎಚ್ಚರಿಕೆ ಕೊಟ್ಟರು.
* ಡಿಜೆ ಸಂಸ್ಕೃತಿಗೆ ಹೇಳಿ ತೀಲಾಂಜಲಿ
ನಮ್ಮ ಮಹಾನೀಯರ ಜಯಂತಿಗಳನ್ನು ಡಿಜೆ ಸಂಸ್ಕೃತಿ ಯಿಂದ ಮುಕ್ತಗೊಳಿಸುವುದು ಸೂಕ್ತ. ಅದರ ಬದಲು ಡೊಳ್ಳು, ಸಮಳ,ಹಲಗೆ, ವೀರಗಾಸೆ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳಿಗೆ ನಾವು ಪ್ರೋತ್ಸಾಹಿಸೋಣ ಈ ಸಲದ ಅಂಬೇಡ್ಕರ್, ಜಗಜೀವನರಾಂ ಜಯಂತಿ ಯಿಂದಲೇ ನಮ್ಮ ಕ್ಷೇತ್ರದಲ್ಲಿ ಡಿಜೆ ಸಂಸ್ಕೃತಿಗೆ ತೀಲಾಂಜಲಿ ನೀಡಿಬಿಡೋಣ, ಎಲ್ಲರೂ ಇದಕ್ಕೆ ಸಹಕರಿಸಿ ಎಂದು ಸಭೆಯಲ್ಲಿ ಹಾಜರಿದ್ದ ವಿವಿಧ ದಲಿತಸಂಘಟನೆಗಳ ಮುಖಂಡರು, ಕಾರ್ಯಕರ್ತರ ಸಹಕಾರವನ್ನು ಶಾಸಕರು ಕೋರಿದರು. ಸಭೆಯು ಸರ್ವನೂಮತದಿಂದ ಶಾಸಕರ ಮಾತಿಗೆ ಬೆಂಬಲ ವ್ಯಕ್ತಪಡಿಸಿತು.
* ವೈಯಕ್ತಿಕ ಹಣದಲ್ಲಿ ಪ್ರಸಾದ ವ್ಯವಸ್ಥೆ:
ಅಂಬೇಡ್ಕರ್ ಜಯಂತಿ ಸಹಿತ ಕ್ಷೇತ್ರದಲ್ಲಿ ಜರುಗುವ ಎಲ್ಲಾ ಮಹಾನೀಯರ ಜಯಂತಿಗೆ ಆಗಮಿಸುವ ಎಲ್ಲರಿಗೂ ನನ್ನ ವೈಯಕ್ತಿಕ ಹಣದಲ್ಲಿ ಪ್ರಸಾದದ ವ್ಯವಸ್ಥೆಯನ್ನು ಮಾಡುವ ಸಂಪೂರ್ಣ ಜವಾಬ್ದಾರಿಯನ್ನು ನಾನೇ ಹೊತ್ತುಕೊಳ್ಳುತ್ತೇನೆ ಎಂದು ಶಾಸಕ ನೇಮಿರಾಜನಾಯ್ಕ್ ಸಭೆಯಲ್ಲಿ ಒಪ್ಪಿಕೊಂಡರು.
* ರೆಡ್ಡಿ ಸಮಾಜ ದಿಂದ ನೀರು, ಪುರಸಭೆಯಿಂದ ಮಜ್ಜಿಗೆ:
ಜಯಂತಿಯ ಮೆರವಣಿಗೆಯಲ್ಲಿ ಭಾಗವಹಿಸುವ ಎಲ್ಲರಿಗೂ ಅರ್ಧ ಲೀಟರ್ ಪ್ರಮಾಣದ 2000 ಕುಡಿಯುವ ನೀರಿನ ಬಾಟಲ್ ಗಳನ್ನು ತಾಲೂಕ ರೆಡ್ಡಿ ಸಮಾಜ ದಿಂದ ಉಚಿತವಾಗಿ ವಿತರಣೆ ಮಾಡುವುದಾಗಿ ಸಮಾಜದ ಅಧ್ಯಕ್ಷ ಬಸವರಾಜರೆಡ್ಡಿ ಸಭೆಗೆ ತಿಳಿಸಿದರು. ಇತ್ತ ಪುರಸಭೆಯಿಂದಲೂ ಮಜ್ಜಿಗೆ ವಿತರಣೆ ಮಾಡುವುದಾಗಿ ಅಧ್ಯಕ್ಷ ಮರಿರಾಮಣ್ಣ ತಿಳಿಸಿದರು. ಮೆರವಣಿಗೆ ಸಾಗಿ ಬರುವ ಮಾರ್ಗದಲ್ಲಿ ಎರಡು ಸ್ಥಳದಲ್ಲಿ ಕೌಂಟರ್ ತೆರೆದು ಮಜ್ಜಿಗೆ ವಿತರಣೆ ಮಾಡುವಂತೆ ಶಾಸಕರು ಸೂಚಿಸಿದರು.
* ರಜೆ ಇದೇ ಎಂದು ಮೋಜು ಮಸ್ತಿ ಬೇಡ, ಎಲ್ಲರೂ ಜಯಂತಿಯಲ್ಲಿ ಪಾಲ್ಗೊಳ್ಳಬೇಕು:
ಅಂಬೇಡ್ಕರ್ ಸಹಿತ ಎಲ್ಲಾ ಮಹಾನೀಯರ ಜಯಂತಿಗಳಲ್ಲಿ ಸರ್ಕಾರಿ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರ ಭಾಗವಹಿಸುವಿಕೆ ಕೇವಲ ಸಾಂಕೇತಿಕವಾಗಿರುತ್ತೆ ಇದು ಗೌರವ ಸೂಚಕವಲ್ಲ. ಜಯಂತಿಗೆ ಸಿಗುವ ರಜೆಯನ್ನು ಮೋಜು,ಮಸ್ತಿಯಲ್ಲಿ ತಲ್ಲಿನರಾಗಲು ದುರ್ಬಳಕೆ ಮಾಡಿಕೊಳ್ಳುವುದು ಸರಿಯಲ್ಲ. ತಾಲೂಕಿನ ಎಲ್ಲಾ ಸರ್ಕಾರಿ ಇಲಾಖೆಗಳ ಅಧಿಕಾರಿ, ನೌಕರರ ವರ್ಗ ಸಂಪೂರ್ಣವಾಗಿ ಹಾಜರಿರುವಂತೆ ನೋಡಿಕೊಳ್ಳಬೇಕೆಂದು ಡಾ.ಅಂಬೇಡ್ಕರ್ ಸಂಘದ ತಾಲೂಕಾಧ್ಯಕ್ಷ ಗದ್ದಿಕೆರಿ ದೊಡ್ಡಬಸಪ್ಪ ಸಭೆಯಲ್ಲಿ ಒತ್ತಾಯಿಸಿದರು.
ದೊಡ್ಡಬಸಪ್ಪ ಪ್ರಸ್ತಾಪಿಸಿರುವ ವಿಚಾರ ನಿರ್ಲಕ್ಷ್ಯ ಮಾಡಬಾರದು. ಎಲ್ಲಾ ಇಲಾಖೆಗಳ ಹಾಜರಾತಿ ಶೇ ನೂರರಷ್ಟಿರ ಬೇಕೆಂದು ಶಾಸಕರು ಸಭೆಯಲ್ಲಿ ಹಾಜರಿದ್ದ ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟರು.
ಪುರಸಭೆ ಅಧ್ಯಕ್ಷ ಮರಿರಾಮಪ್ಪ, ತಹಶಿಲ್ದಾರ ಕವಿತಾ, ಸಿಪಿಐ ವಿಕಾಸ್ ಲಮಾಣಿ, ತಾಪಂ ಇಓ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ, ಸಹಾಯಕರು, ದಲಿತಸಂಘಟನೆಗಳ ಮುಖಂಡರು, ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು.
ತಾಲೂಕ ಸಮಾಜ ಕಲ್ಯಾಣಾಧಿಕಾರಿ ಆನಂದ್ ಡೊಳ್ಳಿನ್ ಹಿಂದಿನ ಜಯಂತಿಯ ನಿರ್ಣಾಯಗಳನ್ನು ಓದಿದರು.