Welcome to sunamipatrike   Click to listen highlighted text! Welcome to sunamipatrike
Friday, April 18, 2025
HomeUncategorizedದೇವರ ಕೆಲಸ ಮಾಡಿರುವೆ ಎಂದು ಹೇಳಿಕೊಳ್ಳುವಷ್ಟು ನಾನು ದೊಡ್ಡವನಲ್ಲ. ನಮ್ಮಿಂದ ಕೆಲಸ ಮಾಡಿಸಿಕೊಳ್ಳುವ ದೇವರು ದೊಡ್ಡವರು....

ದೇವರ ಕೆಲಸ ಮಾಡಿರುವೆ ಎಂದು ಹೇಳಿಕೊಳ್ಳುವಷ್ಟು ನಾನು ದೊಡ್ಡವನಲ್ಲ. ನಮ್ಮಿಂದ ಕೆಲಸ ಮಾಡಿಸಿಕೊಳ್ಳುವ ದೇವರು ದೊಡ್ಡವರು. ಬೆಂಗಳೂರಿನಲ್ಲಿರುವಂತೆ ಬೀದರ್ ಭಾಗದಲ್ಲೂ ದೊಡ್ಡ,ದೊಡ್ಡ ದೇವಸ್ಥಾನಗಳು ನಿರ್ಮಾಣಗೊಳ್ಳುವುದು ಅಗತ್ಯವಿದೆ- ಮಾಜಿ ಸಚಿವ ಬಂಡೇಪ್ಪ ಖಾಶೇಂಪುರ.

  • ಹುಳ್ಳಿಪ್ರಕಾಶ, ಸಂಪಾದಕರು

*ಸುನಾಮಿನ್ಯೂಸ್, ಬೀದರ್ (ಏ.07)

ಭೀರಲಿಂಗೇಶ್ವರ ಮತ್ತು ಮಾಳಿಂಗರಾಯ ದೇವರಿಗೆ ಮಹತ್ವದ ಹಾಗೂ ದೊಡ್ಡಮಟ್ಟದ ಇತಿಹಾಸವಿದೆ. ಮಾಳಿಂಗರಾಯರು ಹುಲಿಯ ಹಾಲು ತಂದು ಕೊಟ್ಟ ಇತಿಹಾಸ ಹೊಂದಿದ್ದಾರೆ ಎಂದು ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದ್ದಾರೆ.

ಭಾನವಾರ ಮಧ್ಯಾಹ್ನ, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಕೋಳಾರ (ಕೆ) ಗ್ರಾಮದ ಶ್ರೀ ಭೀರಲಿಂಗೇಶ್ವರ ಮಂದಿರದ ಆವರಣದಲ್ಲಿ ಜರುಗಿದ ಶ್ರೀ ಭೀರಲಿಂಗೇಶ್ವರ ಕಳಸಾರೋಹಣ ಹಾಗೂ ಶ್ರೀ ಭೀರಲಿಂಗೇಶ್ವರ ಮತ್ತು ಶ್ರೀ ಮಾಳಿಂಗರಾಯರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾಜಿ ಸಚಿವರು ಆದ ಬಂಡೇಪ್ಪ ಅವರು ಮಾತನಾಡಿದರು.

ನಮ್ಮ ಭಾಗದಲ್ಲಿ ಭೀರಲಿಂಗೇಶ್ವರ ದೇವಸ್ಥಾನಗಳು ದೊಡ್ಡಮಟ್ಟದಲ್ಲಿ ಅಭಿವೃದ್ಧಿ ಹೊಂದಿಲ್ಲ. ಬೆಳಗಾವಿ, ಬೆಂಗಳೂರು ಭಾಗದಲ್ಲಿ ದೊಡ್ಡದೊಡ್ಡ ದೇವಸ್ಥಾನಗಳಿವೆ. ನಮ್ಮ ಭಾಗದಲ್ಲಿರುವ ದೇವಸ್ಥಾನಗಳು ಕೂಡ ಅಭಿವೃದ್ಧಿಯಾಗಬೇಕು. ಈ ಭಾಗದ ಜನರು ಎಲ್ಲರೂ ಸೇರಿ ಒಗ್ಗಟ್ಟಾಗಿ ಕೆಲಸ ಮಾಡಿಕೊಂಡು ಸಾಗಬೇಕು ಎಂದರು.

ಕೋಳಾರ (ಕೆ) ಗ್ರಾಮದಲ್ಲಿ ಎಲ್ಲಾ ಸಮಾಜದ ಜನರು ಸೇರಿ ಒಗ್ಗಟ್ಟಿನಿಂದ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುತ್ತಿರುತ್ತಾರೆ. ಅವರಿಗೆ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ. ದೇವರ ಕೆಲಸಗಳನ್ನು ನಾವು ಮಾಡಿದ್ದೇವೆ ಎಂದು ಹೇಳಿಕೊಳ್ಳುವವರು ದೊಡ್ಡವರಲ್ಲ, ಮಾಡಿಸಿಕೊಳ್ಳುವ ದೇವರು ದೊಡ್ಡವರು. ಅದರಂತೆಯೇ ನಾನು ಜನಪ್ರತಿನಿಧಿ ಇದ್ದಾಗ ನಮ್ಮ ಕೈಲಾದ ಸೇವೆಯನ್ನು ನಾವು ಮಾಡಿದ್ದೇವೆ. ಮುಂದೆ ಕೂಡ ಮಾಡುತ್ತೇವೆ ಎಂದು ಮಾಜಿ ಸಚಿವರಾದ ಬಂಡೆಪ್ಪ ಖಾಶೆಂಪುರ್ ರವರು ಜನತೆಗೆ ಭರವಸೆ ನೀಡಿದರು.

ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆರವರು ಮಾತನಾಡಿ, ಭೀರಲಿಂಗೇಶ್ವರರು ಹಾಗೂ ಮಾಳಿಂಗರಾಯರು ಶಿವನ ಸ್ವರೂಪರು. ಮಹಾತ್ಮರು ಸಮಾಜದ ಎಲ್ಲಾ ಜನರಿಗೆ ಒಳಿತು ಮಾಡಿದ್ದಾರೆ. ಮಹಾತ್ಮರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಸಾಗಿದಾಗ ಮಾತ್ರ ಸದೃಢ ಭಾರತ ನಿರ್ಮಾಣ ಸಾಧ್ಯ ಎಂದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದ ತಿಂಥಣಿಯ ಕನಕಗುರುಪೀಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಸಿದ್ದರಾಮನಂದಪುರಿ ಮಹಾಸ್ವಾಮಿಗಳು, ದೇವರ ಹೆಸರಿನಲ್ಲಿ ಪ್ರಾಣಿ ಬಲಿ ಕೊಡುವುದು ನಿಲ್ಲಬೇಕು. ಮಕ್ಕಳಿಗೆ ಒಳ್ಳೆಯ ಸಂಪ್ರದಾಯವನ್ನು ಕಲಿಸಿಕೊಡಬೇಕು. ನಮ್ಮ ಸಂಪ್ರದಾಯವನ್ನು ಉಳಿಸಿ ಬಳೆಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕು ಎಂದರು.

ಪರಮಪೂಜ್ಯರಾದ ಹುಲಿಜಂತಿಯ ಶ್ರೀ ಮಾಳಿಂಗರಾಯ ಮಹಾರಾಜರು ಮಾತನಾಡಿ, ಕೋಳಾರದಲ್ಲಿ ಪ್ರತಿಷ್ಠಾಪನೆ ಮಾಡಲಾಗಿರುವ ಮಾಳಿಂಗರಾಯರ ವಿಗ್ರಹ ತುಂಬಾ ವಿಶೇಷವಾದ ವಿಗ್ರಹವಾಗಿದೆ. ಮಾಳಿಂಗರಾಯರು ಮತ್ತು ಭೀರಲಿಂಗೇಶ್ವರರು ಸಾಮಾನ್ಯ ದೇವರಲ್ಲ. ಧರ್ಮವನ್ನು ಉಳಿಸುವ ಕೆಲಸವನ್ನು ಅವರು ಮಾಡಿದ್ದಾರೆ ಎಂದು ಮಾಳಿಂಗರಾಯರ ಮತ್ತು ಭೀರಲಿಂಗೇಶ್ವರರ ಇತಿಹಾಸವನ್ನು ತಿಳಿಸಿಕೊಟ್ಟರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ತಿಂಥಣಿಯ ಕನಕಗುರುಪೀಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಸಿದ್ದರಾಮನಂದಪುರಿ ಮಹಾಸ್ವಾಮಿಗಳು, ಉಚ್ಚಾದ ಶ್ರೀ ಭೀರಲಿಂಗೇಶ್ವರ ಪಟ್ಟದ ದೇವರು ಮಠದ ಬಾಲ ತಪಸ್ವಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಗೋಪಾಲ ಮುತ್ಯಾರು, ಪರಮಪೂಜ್ಯರಾದ ಹುಲಿಜಂತಿಯ ಶ್ರೀ ಮಾಳಿಂಗರಾಯ ಮಹಾರಾಜರು ವಹಿಸಿದ್ದರು.

ಗ್ಯಾರಂಟಿ ಸಮಿತಿಯ ಜಿಲ್ಲಾಧ್ಯಕ್ಷರಾದ ಅಮೃತರಾವ್ ಚಿಮಕೋಡೆ, ಬಾಬುರಾವ್ ಮಲ್ಕಾಪೂರೆ, ಮಲ್ಲಿಕಾರ್ಜುನ ಬಿರಾದಾರ, ಮನ್ನಾನ್ ಶೇಠ್, ಬಸವರಾಜ ಮಾಳ್ಗೆ, ಕೆ.ಡಿ ಗಣೇಶ್, ತುಳಿಸಿರಾಮ್ ಉಜ್ಜೆ, ಶ್ರೀಕಾಂತ್ ಸ್ವಾಮಿ, ಬಂಡೆಪ್ಪ ಕೋಟೆ, ಸಿದ್ದರಾಮಪ್ಪ ಕಪಲಾಪೂರೆ, ರವಿ ದುರ್ಗೆ, ನಾಗಪ್ಪ, ವಿಜಯಕುಮಾರ್ ಡುಮ್ಮೆ, ಬೊಮ್ಮಗೊಂಡ ಚಿಟ್ಟಾವಾಡಿ, ಶಂಭು, ರಾಜು ಚಿಟ್ಟಾ, ಸಂತೋಷ ಜೋಳದಪಗೆ, ಪ್ರಶಾಂತ್ ಶೇರಿಕಾರ್, ದೀಪಕ್ ಚಿದ್ರಿ, ಲೋಕೋಶ್ ಮೇತ್ರೆ, ಸಂತೋಷ್ ಪಾಟೀಲ್, ಧನರಾಜ್, ಸಚಿನ್, ಅಣ್ಮಪಾಜಿ, ಕಲ್ಲಪ್ಪ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ದೇವಸ್ಥಾನ ಸಮಿತಿಯ ಮುಖಂಡರು, ಗೊಂಡ ಸಮಾಜದ ಪ್ರಮುಖರು, ಗ್ರಾಮಸ್ಥರು ಇದ್ದರು.

  • ವರದಿ- ಅಯ್ಯಣ್ಣ ಪಾನಕಲ್ಲೂರು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
Click to listen highlighted text!