Samantha: ಆಲಿಯಾ ಭಟ್ ನಟನೆಯ ‘ಜಿಗ್ರಾ’ ಸಿನಿಮಾ ತೆಲುಗಿನಲ್ಲಿ ಬಿಡುಗಡೆ ಆಗುತ್ತಿದ್ದು, ಸಿನಿಮಾದ ಪ್ರೀ ರಿಲೀಸ್ ಇವೆಂಟ್ನಲ್ಲಿ ಸಮಂತಾ ಅತಿಥಿಯಾಗಿ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ನಟಿ ಆಲಿಯಾ, ಸಮಂತಾರನ್ನು ಶ್ಲಾಘಿಸಿದರು.
ತೆಲಂಗಾಣ ಸಚಿವೆ ಕೊಂಡ ಸುರೇಖಾ ಹೇಳಿಕೆಯಿಂದ ಒಲ್ಲದ ಕಾರಣಕ್ಕೆ ಸಮಂತಾ ಸುದ್ದಿಯಾಗಿದ್ದರು. ಸಮಂತಾ ಬಗ್ಗೆ ನೀಚ ಹೇಳಿಕೆಯೊಂದನ್ನು ಸಚಿವೆ ಕೊಂಡ ಸುರೇಖಾ ನೀಡಿದ್ದರು. ಆ ಸಮಯದಲ್ಲಿ ತೆಲುಗು ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಸಮಂತಾರ ಬೆಂಬಲಕ್ಕೆ ನಿಂತಿದ್ದರು. ವಿವಾದವಾದ ಬಳಿಕ ಮೊದಲ ಬಾರಿಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ನಟಿ ಸಮಂತಾ ಕಾಣಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಸಮಂತಾಗೆ ಭರಪೂರ ಬೆಂಬಲ ವ್ಯಕ್ತವಾಯಿತು. ರಾಷ್ಟ್ರಪ್ರಶಸ್ತಿ ವಿಜೇತ ನಟಿ ಆಲಿಯಾ ಭಟ್ ಸೇರಿದಂತೆ ಹಲವು ಖ್ಯಾತನಾಮರು ಸಮಂತಾರನ್ನು ಮನಸಾರೆ ಹೊಗಳಿದರು.
ಆಲಿಯಾ ಭಟ್ ನಟನೆಯ ‘ಜಿಗ್ರಾ’ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಹೈದರಾಬಾದ್ನಲ್ಲಿ ಆಯೋಜಿಸಲಾಗಿತ್ತು, ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸಮಂತಾ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ‘ಜಿಗ್ರಾ’ ಸಿನಿಮಾದ ನಟಿ ಮತ್ತು ನಿರ್ಮಾಪಕಿ ಆಲಿಯಾ ಭಟ್, ‘ಪ್ರೀತಿಯ ಸಮಂತಾ, ನೀವು ಆನ್ ಸ್ಕ್ರೀನ್ ಮತ್ತು ಆಫ್ ಸ್ಕ್ರೀನ್ನಲ್ಲಿ ನಿಜಕ್ಕೂ ಹೀರೋ. ನಿಮ್ಮ ಪ್ರತಿಭೆ, ಹೊಡೆತಗಳನ್ನು ಸಹಿಸಿಕೊಂಡು ಮತ್ತೆ ಎದ್ದು ನಿಲ್ಲುವ ರೀತಿ, ನಿಮ್ಮ ಶಕ್ತಿಯ ಅಭಿಮಾನಿ ನಾನು. ಪುರುಷರ ಪ್ರಪಂಚದಲ್ಲಿ ಮಹಿಳಾಗಿರುವುದು ಸುಲಭದ ಕಾರ್ಯವಲ್ಲ. ಆದರೆ ನೀವು ಈ ಲಿಂಗಭೇದಗಳನ್ನು ಮೀರಿ ಬಿಟ್ಟಿದ್ದೀರಿ’ ಎಂದಿದ್ದಾರೆ.
ಇದನ್ನೂ ನೋಡಿ: ರಜನೀಕಾಂತ್ ಜೊತೆ ಸಮಂತಾ ಹೋಲಿಕೆ, ಖ್ಯಾತ ನಿರ್ದೇಶಕ ಕೊಟ್ಟ ಕಾರಣವೇನು?
ಮುಂದುವರೆದು, ‘ನೀವು ನಿಮ್ಮ ಕಾಲುಗಳ ಮೇಲೆ ನಿಂತು, ನಿಮ್ಮ ಶಕ್ತಿ, ಪ್ರತಿಭೆ, ಆತ್ಮವಿಶ್ವಾಸದಿಂದ ಹಲವಾರು ಮಹಿಳೆಯರಿಗೆ ಸ್ಪೂರ್ತಿ ಆಗಿದ್ದೀರಿ. ಈ ಕಾರ್ಯಕ್ರಮಕ್ಕೆ ಆಹ್ವಾನಿಸಲು ನಾನು ತುಸು ದೀರ್ಘವಾದ ಸಂದೇಶವನ್ನೇ ನಿಮಗೆ ಕಳಿಸಿದ್ದೆ. ಆದರೆ ನೀವು ಕೆಲವೇ ಸೆಕೆಂಡ್ಗಳನ್ನು ಪ್ರತಿಕ್ರಿಯಿಸಿ ನಾನು ಬರುತ್ತೇನೆ ಎಂದು ಖಾತ್ರಿಪಡಿಸಿದಿರಿ, ಧನ್ಯವಾದ. ನಾನು ಸುಮ್ಮನೆ ಹೇಳುತ್ತಿಲ್ಲ, ತ್ರಿವಿಕ್ರಮ್ (ನಿರ್ದೇಶಕ) ನಾನು ಹಾಗೂ ಸಮಂತಾ ಇಬ್ಬರೂ ನಿಮ್ಮ ಸಿನಿಮಾನಲ್ಲಿ ನಟಿಸಲು ಇಷ್ಟಪಡುತ್ತೀವಿ. ಎಲ್ಲರೂ ಹೇಳುತ್ತಾರೆ ನಟಿ ಇನ್ನೊಬ್ಬ ನಟಿಯನ್ನು ಪ್ರತಿಸ್ಪರ್ಧೆಯ ರೂಪದಲ್ಲಿ ನೋಡುತ್ತಾರೆ ಎಂದು, ಆದರೆ ಅದು ನಿಜವಲ್ಲ, ನನ್ನ ಸಿನಿಮಾದ ಪ್ರಚಾರಕ್ಕೆ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಆಗಿರುವ ಸಮಂತಾ ಬಂದಿರುವುದು ನನಗೆ ನಿಜಕ್ಕೂ ಬಹಳ ಹೆಮ್ಮೆ’ ಎಂದರು ಆಲಿಯಾ ಭಟ್.
ನಾಟು-ನಾಟು ಬಗ್ಗೆಯೂ ಮಾತನಾಡಿದ ಆಲಿಯಾ, ‘ಆರ್ಆರ್ಆರ್ ಸಿನಿಮಾದ ಬಳಿಕ ನನಗೆ ವಿಶೇಷ ಪ್ರೀತಿ ತೆಲುಗು ಪ್ರೇಕ್ಷಕರಿಂದ ಸಿಗುತ್ತಿದೆ. ‘ನಾಟು-ನಾಟು’ ಹಾಡು ನಮ್ಮ ಮನೆಯಲ್ಲಿ ಪ್ರತಿದಿನವೂ ಕೇಳುತ್ತದೆ. ನನ್ನ ಮಗಳು ರಾಹಾಗೆ ಆ ಹಾಡು ಬಹಳ ಇಷ್ಟ. ನಾನು ಮತ್ತು ರಾಹಾ ಪ್ರತಿದಿನ ಆ ಹಾಡು ಹಾಕಿಕೊಂಡು ಕುಣಿಯುತ್ತೇವೆ. ತೆಲುಗು ಪ್ರೇಕ್ಷಕರು ನಿಜಕ್ಕೂ ಅದ್ಭುತ. ಒಂದು ಒಳ್ಳೆಯ ಸಿನಿಮಾವನ್ನು ಪ್ರೀತಿ ಮಾಡುವುದರಲ್ಲಿ ತೆಲುಗು ಪ್ರೇಕ್ಷಕರೇ ಮೊದಲು. ಇದೇ ಕಾರಣಕ್ಕೆ ನಾವು ‘ಗಂಗೂಬಾಯಿ ಕಾಠಿಯಾವಾಡಿ’ ಹಾಗೂ ‘ಬ್ರಹ್ಮಾಸ್ತ್ರ’ ಸಿನಿಮಾಗಳನ್ನು ತೆಲುಗಿನಲ್ಲಿ ಬಿಡುಗಡೆ ಮಾಡಿದೆವು. ಈಗ ‘ಜಿಗ್ರಾ’ ಸಿನಿಮಾವನ್ನು ಸಹ ತೆಲುಗಿನಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಸಿನಿಮಾ ಅಕ್ಟೋಬರ್ 11 ಕ್ಕೆ ತೆರೆಗೆ ಬರಲಿದೆ’ ಎಂದರು.