- ಹುಳ್ಳಿಪ್ರಕಾಶ, ಸಂಪಾದಕರು
- ಸುನಾಮಿ ನ್ಯೂಸ್
*ವಿಜಯನಗರ (ಹೊಸಪೇಟೆ ),ನ,7
ಪ್ರಸ್ತುತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ನಾಡಿನ ಹಿರಿಯ ರೈತ ಹೋರಾಟಗಾರರಾದ ಜೆಎಂ. ವೀರಸಂಗಯ್ಯ ಅವರನ್ನು ವಿಜಯನಗರ ಜಿಲ್ಲಾಧಿಕಾರಿ ಎಂಎಸ್.ದಿವಾಕರ ಗುರುವಾರ ಸನ್ಮಾನಿಸಿ ಗೌರವಿಸಿದರು.
ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ರೈತ ಹೋರಾಟಕ್ಕೆ ಭದ್ರವಾದ ನೆಲೆ ಒದಗಿಸಿದ ಪ್ರಮುಖ ರೈತ ನಾಯಕರಲ್ಲಿ ಜೆಎಂ.ವೀರಸಂಗಯ್ಯ ಒಬ್ಬರಾಗಿದ್ದಾರೆ. ತಮ್ಮ ನಿರಂತರ ಹೋರಾಟಗಳಿಂದಾಗಿಯೇ ಪ್ರಸ್ತುತ ರಾಜ್ಯ ಮಟ್ಟದಲ್ಲಿ ಗುರುತಿಸುವಂತಹ ರೈತ ನಾಯಕರಾಗಿ ಅವರು ಬೆಳೆದಿದ್ದಾರೆ.
ಅನ್ನದಾತರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಿಂದ ಅವರನ್ನು ಮತ್ತು ಅವರು ಅವಲಂಬಿಸಿದ್ದ ಕೃಷಿ ವಲಯವನ್ನು ರಕ್ಷಿಸಲು ಹೋರಾಟವೇ ಸರಿಯಾದ ಮಾರ್ಗವೇ ಹೊರತು ಯಾವ ಜನಪ್ರತಿನಿಧಿ, ಸರ್ಕಾರಗಳ ಮರ್ಜಿಯಿಂದ ಸಾಧ್ಯವಿಲ್ಲ ಎಂದು ಹೋರಾಟವನ್ನೇ ನಂಬಿದವರಾಗಿದ್ದಾರೆ ವೀರಸಂಗಯ್ಯ.
ಹೋರಾಟದ ಮೂಲಕ ರೈತರಿಗೆ ನ್ಯಾಯ ಕೊಡಿಸುವ ಸಮಯದಲ್ಲಿ ಪೊಲೀಸರ ಲಾಠಿ, ಬೂಟಿನೇಟು ತಿಂದಿದ್ದಲ್ಲದೆ, ತಮ್ಮ ಎರಡು ಕಿಡ್ನಿಗಳನ್ನು ವೀರಸಂಗಯ್ಯ ಕಳೆದುಕೊಳ್ಳಬೇಕಾಯ್ತು. ಆಗಂತಾ ಅವರು ಈ ಕ್ಷಣಕ್ಕೂ ಹೋರಾಟ ದಿಂದ ಹಿಮ್ಮುಖರಾಗಿಲ್ಲ. ಚಳುವಳಿ, ಹೋರಾಟವನ್ನೇ ಮನೆ,ಮಂತ್ರವಾಗಿಸಿಕೊಂಡು ರೈತ ಸಂಘಟನೆಯ ಬಲವರ್ಧನೆಗಾಗಿ ಶ್ರಮಿಸುತ್ತಿದ್ದಾರೆ.
ಇವರ ನಿರಂತರ ಹೋರಾಟ, ರೈತರಪರವಾದ ಬದ್ಧತೆ,ನಿಯತ್ತುಗಳನ್ನು ಗುರುತಿಸಿ ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ವೀರಸಂಗಯ್ಯರವರನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿ, ಪ್ರಶಸ್ತಿ ನೀಡಿ ಗೌರವಿಸಿದೆ.
ಪ್ರಶಸ್ತಿ ಪುರಸ್ಕಾರ ಪಡೆದುಕೊಂಡು ಹುಟ್ಟೂರು ಹಗರಿಬೊಮ್ಮನಹಳ್ಳಿ ತಾಲೂಕಿನ ಪಿಂಜಾರ್ ಹೆಗ್ಡಾಳ ಗ್ರಾಮಕ್ಕೆ ಹಿಂದಿರುಗಿರುವ ಸುದ್ದಿ ಅರಿತುಕೊಂಡು ತಮ್ಮ ಕಚೇರಿಗೆ ಅವರನ್ನು ಆಹ್ವಾನಿಸಿ ಸನ್ಮಾನಿಸಿ ಗೌರವಿಸುವ ಕಾರ್ಯವನ್ನು ಜಿಲ್ಲಾಧಿಕಾರಿಗಳು ಮಾಡಿದ್ದಾರೆ.
ಈ ವೇಳೆ ರೈತಹೋರಾಟಗಾರರಾದ ವರದಾಪುರಗೋಣಿಬಸಪ್ಪ, ಅನಂತಶಯನಗುಡಿ ಯು.ನೀಲಕಂಠ, ತಂಬ್ರಹಳ್ಳಿ ರವಿ ಸೇರಿದಂತೆ ಹಲವರು ಜೊತೆಯಲ್ಲಿದ್ದರು.
- ಹುಳ್ಳಿಪ್ರಕಾಶ, ಸಂಪಾದಕರು